ನವದೆಹಲಿ: ಜಿ20 ಗಣ್ಯರಿಗೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲು 'ಪ್ರೆಸಿಡೆಂಟ್ ಅಫ್ ಭಾರತ್' ಎಂದು ಉಲ್ಲೇಖಿಸಿರುವ ಬಗ್ಗೆ ವಿವಾದ ಎದ್ದಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ಕುರಿತಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹಂಚಿಕೊಂಡಿರುವ ಅಧಿಕೃತ ಮಾಹಿತಿಯಲ್ಲಿ 'ಪ್ರೈಮ್ ಮಿನಿಸ್ಟರ್ ಆಫ್ ಭಾರತ್' ಎಂದು ಉಲ್ರೇಖಿಸಿರುವುದು ಕಂಡುಬಂದಿದೆ.
'ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್' ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, ಮೋದಿ ಇಂಡೊನೇಷ್ಯಾ ಭೇಟಿ ಕುರಿತ ಅಧಿಕೃತ ಮಾಹಿತಿಯ ಚಿತ್ರ ಹಂಚಿಕೊಂಡಿದ್ದಾರೆ.
20 ನೇ ಆಸಿಯಾನ್--ಇಂಡಿಯಾ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಸೆಪ್ಟೆಂಬರ್ 7ರಂದು ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ತೆರಳಲಿದ್ದಾರೆ.
ಜಿ20 ಗಣ್ಯರಿಗೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಅಫ್ ಭಾರತ ಎಂದು ಉಲ್ಲೇಖಿಸಿರುವ ಬಗ್ಗೆ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರಂದು ಕಳುಹಿಸಲಾದ ಜಿ-20 ಔತಣಕೂಟದ ಆಹ್ವಾನದಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ'ಬದಲು 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖಿಸಲಾಗಿದೆ. ಸಂವಿಧಾನದ 1ನೇ ವಿಧಿಯ ಪ್ರಕಾರ, 'ಭಾರತ ಎಂದರೆ ಇಂಡಿಯಾ, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ. ಆದರೆ. ಈಗ ಈ 'ಯೂನಿಯನ್ ಆಫ್ ಸ್ಟೇಟ್ಸ್' ಕೂಡ ಆಕ್ರಮಣಕ್ಕೆ ಒಳಗಾಗಿದೆ'ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿ ಕಾರಿದ್ದರು.