ನವದೆಹಲಿ: ಕಾರು ತಯಾರಕರು ತಮ್ಮ ಉತ್ಪಾದನೆಯನ್ನು ಮಿತಿಗೊಳಿಸದೇ ಇದ್ದರೆ ಡೀಸೆಲ್ ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿ, ಮಾರಾಟ ಕಷ್ಟವಾಗಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾರತೀಯ ಕಾರು ತಯಾರಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ದೆಹಲಿಯಲ್ಲಿಂದು ನಡೆದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) 63ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಗಡ್ಕರಿ ಅವರು ಮಾತನಾಡಿದರು.
ಡೀಸೆಲ್ಗೆ ವಿದಾಯ ಹೇಳಿ… ಡೀಸೆಲ್ ವಾಹನಗಳ ತಯಾರಿಕೆಯನ್ನು ನಿಲ್ಲಿಸಿ, ಇಲ್ಲವಾದಲ್ಲಿ ನಾವು ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಡೀಸೆಲ್ ಕಾರುಗಳ ಮಾರಾಟ ಕಷ್ಟವಾಗಲಿದೆ ಎಂದು ಗಡ್ಕರಿ ಅವರು ಹೇಳಿದರು.
ಡೀಸೆಲ್ ವಾಹನಗಳ ಮಾರಾಟದ ಮೇಲೆ ಶೇ. 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಇಂತಹ ಪ್ರಸ್ತಾವನೆಯನ್ನು ಸರ್ಕಾರ ಸದ್ಯಕ್ಕೆ ಪರಿಗಣಿಸಿಲ್ಲ. 2070ರ ವೇಳೆಗೆ ಕಾರ್ಬನ್ ನೆಟ್ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಟೋಮೊಬೈಲ್ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಇಂಧನಗಳ ಆಮದು ಬದಲಿಗಳಾಗಿರಬೇಕು, ವೆಚ್ಚ-ಪರಿಣಾಮಕಾರಿಯಾಗಿರಬೇಕು, ಸ್ಥಳೀಯ ಮತ್ತು ಮಾಲಿನ್ಯ ಮುಕ್ತವಾಗಿರಬೇಕು ಎಂದು ಗಡ್ಕರಿ ಅವರು ಎಕ್ಸ್(ಟ್ವಿಟರ್)ನಲ್ಲಿ ತಿಳಿಸಿದರು.
ಸದ್ಯ ಆಟೋಮೊಬೈಲ್ ಕ್ಷೇತ್ರದ ಮೇಲೆ ಶೇ. 28 ಜಿಎಸ್ಟಿ ಇದೆ. ಅಲ್ಲದೆ, ಹೆಚ್ಚುವರಿ ಸೆಸ್ ( ವಾಹನದ ಮಾದರಿಗೆ ಅನುಗುಣವಾಗಿ ಶೇ. 1 ರಿಂದ ಶೇ. 22ರವರೆಗೆ) ಕೂಡ ಇದೆ. ಎಸ್ಯುವಿ ವಾಹನಗಳು 28 ರಷ್ಟು ಜಿಎಸ್ಟಿ ಮತ್ತು 22 ರಷ್ಟು ಸೆಸ್ನೊಂದಿಗೆ ಅತ್ಯಧಿಕ ತೆರಿಗೆಯನ್ನು ಹೊಂದಿದೆ.ಪ್ರಸ್ತುತ ದೇಶದಲ್ಲಿ ಮಾರುತಿ ಸುಜುಕಿ ಮತ್ತು ಹೋಂಡಾ ಕಂಪನಿಗಳು ಡೀಸೆಲ್ ಚಾಲಿತ ವಾಹನಗಳ ತಯಾರಿಕೆಯನ್ನು ನಿಲ್ಲಿಸಿವೆ.