ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯು 'ಸಮ್ಮತಿಯ ಲೈಂಗಿಕ ಕ್ರಿಯೆಗೆ ನಿಗದಿ ಮಾಡಿರುವ ವಯಸ್ಸನ್ನು' ತಗ್ಗಿಸುವ ಕೆಲಸ ಮಾಡಬಾರದು ಎಂದು ಕೇಂದ್ರ ಕಾನೂನು ಆಯೋಗವು ಸಲಹೆ ನೀಡಿದೆ.
ಆದರೆ, 16 ವರ್ಷ ಮೇಲ್ಪಟ್ಟ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಲೈಂಗಿಕ ಸಂಪರ್ಕಕ್ಕೆ 'ಪರೋಕ್ಷವಾಗಿ ಸಮ್ಮತಿಸಿದ್ದ' ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವಾಗ, ನ್ಯಾಯಾಂಗವು ಮಾರ್ಗಸೂಚಿ ಆಧರಿಸಿದ ವಿವೇಚನಾ ಅಧಿಕಾರ ಬಳಸುವ ವ್ಯವಸ್ಥೆ ಬೇಕು ಎಂದು ಅದು ಹೇಳಿದೆ.
18 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಮಾತ್ರ 'ಲೈಂಗಿಕ ಕ್ರಿಯೆ'ಗೆ ಸಮ್ಮತಿ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಪೋಕ್ಸೊ ಕಾಯ್ದೆಯು ವ್ಯಾಖ್ಯಾನಿಸಿದೆ.
16 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ, 18 ವರ್ಷದೊಳಗಿನ ಮಕ್ಕಳು ಲೈಂಗಿಕ ಕ್ರಿಯೆಗೆ 'ಪರೋಕ್ಷವಾಗಿ ಸಮ್ಮತಿಸಿದ್ದ' ಪ್ರಕರಣಗಳನ್ನು ನಿಭಾಯಿಸಲು ಕಾನೂನಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. 'ಪರೋಕ್ಷ ಸಮ್ಮತಿ'ಯನ್ನು ಕಾನೂನಿನ ಅಡಿಯಲ್ಲಿ 'ಸಮ್ಮತಿ' ಎಂದು ಭಾವಿಸಬಾರದು ಎಂದು ವರದಿಯು ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಋತುರಾಜ್ ಅವಸ್ಥಿ ನೇತೃತ್ವದಲ್ಲಿ ಆಯೋಗವು ವರದಿ ಸಿದ್ಧಪಡಿಸಿದೆ.
ಸಮ್ಮತಿಯ ವಯಸ್ಸನ್ನು ತಗ್ಗಿಸುವುದರಿಂದ ಬಾಲ್ಯ ವಿವಾಹ ಮತ್ತು ಮಕ್ಕಳ ಕಳ್ಳಸಾಗಣೆಯನ್ನು ತಡೆಯುವ ಪ್ರಯತ್ನಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ವರದಿ ಎಚ್ಚರಿಸಿದೆ. ಹದಿಹರೆಯದವರ ಪ್ರೀತಿಯನ್ನು ಹತ್ತಿಕ್ಕುವುದು ಕಷ್ಟ, ಲೈಂಗಿಕ ಕ್ರಿಯೆಯ ಹಿಂದೆ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂಬಂತಹ ಪ್ರಕರಣಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಆಯೋಗವು ನ್ಯಾಯಾಲಯಗಳಿಗೆ ಸಲಹೆ ನೀಡಿದೆ.
ಲೈಂಗಿಕ ಸಂಪರ್ಕಕ್ಕೆ 16ರಿಂದ 18 ವರ್ಷದೊಳಗಿನ ಮಕ್ಕಳು ಪರೋಕ್ಷವಾಗಿ ಸಮ್ಮತಿಸಿದ್ದ ಪ್ರಕರಣಗಳನ್ನು, ಪೋಕ್ಸೊ ಅಡಿಯಲ್ಲಿ ನಿರ್ವಹಿಸುವ ಇತರ ಪ್ರಕರಣಗಳಷ್ಟೇ ಕಠಿಣವಾಗಿ ನಿರ್ವಹಿಸಬೇಕಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಮಾರ್ಗಸೂಚಿ ಆಧರಿಸಿದ ವಿವೇಚನಾ ಅಧಿಕಾರನ್ನು ನ್ಯಾಯಾಂಗ ಬಳಸುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಆಯೋಗ ಹೇಳಿದೆ. 'ಹೀಗೆ ಮಾಡುವುದರಿಂದ ಕಾನೂನು ಸಮತೋಲನದಿಂದ ಕೂಡಿದ್ದಾಗುತ್ತದೆ. ಮಕ್ಕಳ ಹಿತಾಸಕ್ತಿಯನ್ನು ಸರಿಯಾಗಿ ಕಾಯುತ್ತದೆ' ಎಂದು ವರದಿ ಹೇಳಿದೆ.
'ಮಕ್ಕಳ ನಡುವೆ ಹಾಗೂ ಮಕ್ಕಳೊಂದಿಗಿನ ಲೈಂಗಿಕ ಚಟುವಟಿಕೆಗಳನ್ನು ಸಾರಾಸಗಟಾಗಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದಾಗ, ಅದು ಮಕ್ಕಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದರೂ, ಲೈಂಗಿಕ ಕುತೂಹಲದ ಕಾರಣದಿಂದಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಬಹುದಾದ ಹುಡುಗರು ಹಾಗೂ ಹುಡುಗಿಯರ ಬಂಧನಕ್ಕೆ ಅದು ದಾರಿ ಮಾಡಿಕೊಡುತ್ತಿದೆ' ಎಂದು ವರದಿಯಲ್ಲಿ ಹೇಳಲಾಗಿದೆ.