ತಲಶ್ಶೇರಿ: ತಿರುವಂಗತಮ್ಮ ಎಂದೇ ಖ್ಯಾತರಾಗಿದ್ದ ತಲಶ್ಚೇರಿಯ ಅವಧೂತ ಮಾತೆ(95) ಸಮಾಧಿಯಾಗಿದ್ದಾರೆ. ಅವಧೂತೆ ಅಮ್ಮ ತಿರುವಂಗಾಟ್‍ನ ಕೀಶಾಂತಿ ಮುಕ್ಕಿಯಲ್ಲಿರುವ ಶ್ರೀನಿವಾಸ ನಿಲಯದ ಜಯಕುಮಾರ್ ಅವರ ಮನೆಯಲ್ಲಿ 49 ವರ್ಷಗಳಿಂದ ವಾಸವಾಗಿದ್ದರು.
ಶುಕ್ರವಾರ ಸಂಜೆ 5.35ರ ಸುಮಾರಿಗೆ ಅವರು ದೇಹತ್ಯಜಿಸಿದ್ದಾರೆ. ತಲಶ್ಶೇರಿ ಮತ್ತು ತಿರುವಂಗಾಟ್ ಪರಿಸರದಲ್ಲಿ ಯಾರೊಂದಿಗೂ ಒಂದು ಮಾತನ್ನೂ ಆಡದೆ ಚಿನ್ಮುದ್ರೆಯೊಂದಿಗೆ ಭಗವದ್ ಸ್ಮರಣೆಯಲ್ಲೇ ಸದಾ ನಿರತರಾಗಿದ್ದ ಇವರಿಗೆ ಅನೇಕ ಭಕ್ತರಿದ್ದಾರೆ. ಹಣ, ಪುರಸ್ಕಾರ ಸ್ವೀಕರಿಸದೆ ವಿಶೇಷ ಜೀವನ ನಡೆಸಿದ್ದ ಇವರ ದರ್ಶನಕ್ಕೆ ವಿದೇಶಿಗರೂ ಬರುತ್ತಿದ್ದರು. ಶನಿವಾರ ಸಂಜೆ 4 ಕ್ಕೆ ಮಡಪಳ್ಳಿ ಬೀಚ್ ರಸ್ತೆಯಲ್ಲಿರುವ ಮಠದಲ್ಲಿ ಅಂತ್ಯಕ್ರಿಯೆ ನಡೆಯಿತು.
ತಲಶ್ಚೆರಿಗೆ ಬಂದ ಈ ಸನ್ಯಾಸಿನಿಯು ತನ್ನ ಭಾಷೆ ಮತ್ತು ಉಡುಗೆಯಿಂದ ಕರ್ನಾಟಕ ಅಥವಾ ಆಂಧ್ರದ ಮೂಲನಿವಾಸಿ ಎಂದು ನಂಬಲಾಗಿದೆ. ಸಹಸ್ರಾರು ಭಕ್ತರು ಜಾತಿ, ಮತಗಳ ಭೇದವಿಲ್ಲದೆ ನಿತ್ಯವೂ ಇವರನ್ನು ಭೇಟಿಯಾಗುತ್ತಿದ್ದರು. ಆದರೆ ವಿಶೇಷವೆಂದರೆ ಈ ಅವಧೂತೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅವರು 95 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಎಂದು ನಂಬಲಾಗಿದೆ. ಶ್ರೀಮಂತ ಭಕ್ತರು ಸೇರಿದಂತೆ ಅನೇಕರು ಮನೆಗೆ ಕರೆದೊಯ್ಯಲು ಬರುತ್ತಿದ್ದರೂ ಯಾರೊಂದಿಗೂ ತೆರಳುತ್ತಿರಲಿಲ್ಲ. ಮಂಜೋಡಿ ಮತ್ತು ತಿರುವಂಗಾಡಿ ಪ್ರದೇಶದಲ್ಲಿ ಶ್ರೀರಾಮಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಕರ್ನಾಟಕ ಶೈಲಿಯ ಸೀರೆಯನ್ನು ಮಾತ್ರ ಧರಿಸಿ ಎರಡು ಕೈಗಳನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿದ್ದುದು ಇವರ ವಿಶಿಷ್ಟ ಶೈಲಿಯಾಗಿತ್ತು.