ಕಾಸರಗೋಡು: ಕೇರಳಕ್ಕೆ ಮಂಜೂರಾಗಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನ ಪರೀಕ್ಷಾರ್ಥ ಸಂಚಾರ ಕಾಸರಗೋಡಿನಿಂದ ಶುಕ್ರವಾರ ಆರಂಭಗೊಂಡಿತು. ಕಾಸರಗೋಡು ರೈಲ್ವೆ ಪೊಲೀಸರು, ರಐಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿ ಕಾಸರಗೋಡು ನಿಲ್ದಾಣದಲ್ಲಿದ್ದು, ರೈಲಿಗೆ ಸ್ವಾಗತ ಕೋರಿದರು.
ಆರಂಭದಲ್ಲಿ ಕೇರಳಕ್ಕೆ ಮಂಜೂರಾಗಿ ಲಭಿಸಿದ ರೈಲು ನೀಲಿ, ಬಣ್ಣದಿಂದ ಕೂಡಿದ್ದರೆ, ಎರಡನೇ ವಂದೇಭಾರತ್ ಎಕ್ಸ್‍ಪ್ರೆಸ್ ರೈಲು ಕೇಸಿ, ಬಿಳಿ ಬಣ್ಣದಿಂದ ಕೂಡಿದೆ. ಗುರುವಾರ ರಾಥ್ರಿ 11.42ಕ್ಕೆ ಕಾಸರಗೋಡು ನಿಲ್ದಾಣ ಆಗಮಿಸಿದ ರೈಲು, ಶುಕ್ರವಾರ ಬೆಳಗ್ಗೆ 7ಕ್ಕೆ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದೆ. ಕಾಸರಗೋಡು-ತಿರುವನಂತಪುರ ಮಧ್ಯೆ ಭಾನುವಾರದಿಂದ ಸಂಚಾರ ಆರಂಭಿಸಲಿರುವ ರೈಲಿಗೆ ಸೆ. 24ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್‍ಫರೆನ್ಸ್ ಮೂಲಕ ಪ್ರಧಾನಿ ನರೆಂದ್ರ ಮೋದಿ ದೆಹಲಿಯಿಂದ ಚಾಲನೆ ನೀಡಲಿದ್ದಾರೆ. ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಫ್ಲ್ಯಾಗ್‍ಆಫ್ ನಡೆಯಲಿದೆ. ರೈಲಿನ ಅಧಿಕೃತ ಸಂಚಾರ ಸೆ. 26ಕ್ಕೆ ಆರಂಭಗೊಳ್ಳಲಿದೆ. ಆರಂಭದ ದಇನ ರಾಜ್ಯದ ವಿವಿಧ ನಿಲ್ದಾಣಗಳಲ್ಲಿ ವಂದೇಭಾರತ್ ರೈಲಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7ಕ್ಕೆ ಕಾಸರಗೋಡಿನಿಂದ ಸಂಚಾರ ಆರಂಭಿಸಲಿರುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ಸಂಜೆ 4.05ಕ್ಕೆ ತಿರುವನಂತಪುರದಿಂದ ಹೊರಟು ರಾತ್ರಿ 11.55ಕ್ಕೆ ಕಾಸರಗೋಡು ತಲುಪಲಿದೆ.
ಈ ಹಿಂದೆ ಕೇರಳಕ್ಕೆ ಮಂಜೂರಾಗಿರುವ ವಂದೇಭಾರತ್ ಎಕ್ಸ್‍ಪ್ರೆಸ್ ರೈಲು ಕೋಟ್ಟಾಯಂ ಹಾದಿಯಾಗಿ ಸಂಚರಿಸುತ್ತಿದ್ದರೆ, ಹೊಸ ರೈಲು ಆಲಪ್ಪುಳ ಹಾದಿಯಾಗಿ ಸಂಚರಿಸಲಿದೆ. ಕಣ್ಣೂರು, ಕೋಯಿಕ್ಕೋಡು, ತೃಶ್ಯೂರ್, ಎರ್ನಾಕುಳಂಸೌತ್, ಆಲಪ್ಪುಳ, ಕೊಲ್ಲಂ ನಿಲ್ದಾಣಗಳಲ್ಲಿ ರೈಲಿಗೆ ನಿಲುಗಡೆ ಕಲ್ಪಿಸಲಾಗಿದೆ. ಕಾಸರಗೊಡು-ತಿರುವನಂತಪುರ ನಡುವಿನ ಸಂಚಾರಕ್ಕೆ ಎಂಟು ತಾಸು ಹಾಗೂ ತಿರುವನಂತಪುರದಿಂದ ಕಾಸರಗೋಡಿಗೆ 7.55ಗಂಟೆ ನಿಗದಿಪಡಿಸಲಾಗಿದೆ. ವಾರದಲ್ಲಿ ಒಟ್ಟು ಆರು ದಿವಸಗಳ ಕಾಲ ರ್ಯಲು ಸಂಚಾರ ನಡೆಸಲಿದೆ.