ಚೆನ್ನೈ: ಸನಾತನ ಧರ್ಮದ ಕುರಿತಂತೆ ತಮಿಳುನಾಡು ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಇದರ ಮಧ್ಯೆ ಮದ್ರಾಸ್ ಹೈಕೋರ್ಟ್ ಹಿಂದೂ ಜೀವನ ಪದ್ದತಿ ಪಾಲಿಸುವವರಿಗೆ ಸನಾತನ ಧರ್ಮ ಎಂಬುದು ಚಿರಂತನ ಕರ್ತವ್ಯಗಳಾಗಿದ್ದು, ದೇಶ, ಪೋಷಕರು, ಗುರುಗಳ ಬಗೆಗಿನ ಕರ್ತವ್ಯಗಳ ಒಟ್ಟು ಮೊತ್ತವಾಗಿದೆ. ಅಂತಹ ಕರ್ತವ್ಯಗಳನ್ನು ಏಕೆ ನಾಶಪಡಿಸಬೇಕು ಎಂದು ಪ್ರಶ್ನಿಸಿದೆ.
ತಮಗೆ ಸನಾತನ ಧರ್ಮದ ಸುತ್ತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅರಿವಿದ್ದು ಅದರ ಬಗ್ಗೆ ಚಿಂತಿಸದೇ ಇರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್ ಶೇಷಸಾಯಿ ತಿಳಿಸಿದ್ದಾರೆ.
ಸನಾತನ ಧರ್ಮ ಜೀವನ ವಿಧಾನವಾಗಬೇಕೆಂಬ ಆಶಯ ಹೊಂದಿದ್ದರೂ ಕೇವಲ ಜಾತಿ ಮತ್ತು ಅಸ್ಪೃಶ್ಯತೆ ಪ್ರಚಾರ ಮಾಡುವುದಕ್ಕಾಗಿ ಅದು ಇದೆ ಎಂಬ ಕಲ್ಪನೆ ಹರಡಿಕೊಂಡಿತು. ಸನಾತನ ಧರ್ಮದ ತತ್ವದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇದ್ದರೆ ಅದನ್ನು ಸಹಿಸಲಾಗದು. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿರುವುದರಿಂದ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಸಂಸ್ಥಾಪಕ ಸಿ ಎನ್ ಅಣ್ಣಾದೊರೈ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 'ಸನಾತನಕ್ಕೆ ವಿರೋಧ' ಎಂಬ ವಿಚಾರವಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಸ್ಥಳೀಯ ಸರ್ಕಾರಿ ಕಲಾ ಕಾಲೇಜು ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಇಳಂಗೋವನ್ ಎಂಬವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ವಿಚಾರಗಳನ್ನು ಹಂಚಿಕೊಂಡಿತು.
ಕಾಲೇಜು ಈಗಾಗಲೇ ಸುತ್ತೋಲೆ ಹಿಂಪಡೆದಿದೆ ಎಂಬ ವಿಚಾರ ಗಮನಿಸಿದ ನ್ಯಾಯಾಲಯ ಮನವಿಯನ್ನು ವಿಲೇವಾರಿ ಮಾಡಿದೆ.