ಚಂಡೀಗಢ (PTI): 'ಭಾರತೀಯ ಸೇನೆಯ ಸುಗಮ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸಲು ಭಾರತ ಮತ್ತು ಚೀನಾ ಗಡಿ ಪ್ರದೇಶದ ಉದ್ದಕ್ಕೂ ಕಳೆದ ಮೂರು ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ' ಎಂದು ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಹೇಳಿದ್ದಾರೆ.
ಇಲ್ಲಿನ ಗಡಿ ಪ್ರದೇಶದಲ್ಲಿ ಬಿಆರ್‌ಒದಿಂದ ನಡೆಯುತ್ತಿರುವ ರಕ್ಷಣಾ ವಿಭಾಗಕ್ಕೆ ಸೇರಿದ ವಾಯು ಸರಕು ರವಾನೆ ಘಟಕದ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
' ಚೀನಾಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಂಸ್ಥೆಯು ಆದ್ಯತೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಹೊಸ ತಂತ್ರಜ್ಞಾನ ಹಾಗೂ ಹೆಚ್ಚಿನ ಆರ್ಥಿಕ ನೆರವು ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಗೆ ಅನುದಾನವನ್ನು ಹೆಚ್ಚಿಸಿರುವುದೇ ಇದಕ್ಕೆ ನಿದರ್ಶನ' ಎಂದರು.
'ಬಿಆರ್‌ಒ ಸೇರಿದಂತೆ ಇತರೇ ಏಜೆನ್ಸಿಗಳು ಚೀನಾ ಗಡಿ ಪ್ರದೇಶದಲ್ಲಿ ಸಾಕಷ್ಟು ಮೂಲ ಸೌಕರ್ಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿವೆ. ಈಗಾಗಲೇ, ₹ 8 ಸಾವಿರ ಕೋಟಿ ವೆಚ್ಚದಡಿ 300 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ' ಎಂದು ವಿವರಿಸಿದರು.
' 295 ರಸ್ತೆಗಳು, ಸೇತುವೆಗಳು, ಸುರಂಗಗಳು ಸೇರಿದಂತೆ ಆಯಕಟ್ಟಿನ ಸ್ಥಳದಲ್ಲಿ ವಾಯುನೆಲೆಗಳನ್ನು ನಿರ್ಮಿಸಿ ದೇಶಕ್ಕೆ ಸಮರ್ಪಿಸಲಾಗಿದೆ. ರಸ್ತೆ ನಿರ್ಮಾಣದಲ್ಲಿ ಉಕ್ಕು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗಿದೆ. ಇನ್ನು ನಾಲ್ಕು ತಿಂಗಳಿನಲ್ಲಿ 60ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಳ್ಳಲಿದ್ದು, ಸಂಸ್ಥೆಯ ಕೆಲಸದ ವೇಗವೂ ಹೆಚ್ಚಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರವು ಬಿಆರ್‌ಒಗೆ ಉತ್ತಮ ಸಹಕಾರ ನೀಡುತ್ತಿದೆ. ಇದು ಸಂಸ್ಥೆಯ ಕೆಲಸದ ವೇಗ ವೃದ್ಧಿಗೆ ಸಹಕಾರಿಯಾಗಿದೆ. ಅನುದಾನ, ಯಂತ್ರೋಪಕರಣ, ಹೊಸ ತಂತ್ರಜ್ಞಾನ ಸೇರಿದಂತೆ ಕಾರ್ಯವಿಧಾನಗಳನ್ನು ಸರಳೀಕರಿಸಲಾಗಿದೆ. ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಭಾರತವು ಇನ್ನು ನಾಲ್ಕೈದು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿದರು.
ವಾಯು ಸರಕು ರವಾನೆ ಘಟಕ
ನಿರ್ಮಾಣ ಚಂಡೀಗಢದಲ್ಲಿ ಬಿಆರ್‌ಒದಿಂದ 3ಡಿ ತಂತ್ರಜ್ಞಾನ ಆಧಾರಿತ ವಿಶ್ವದರ್ಜೆಯ ಅತಿದೊಡ್ಡ ಹಿಮಾಂಕ್ ವಾಯು ಸರಕು ರವಾನೆ ಘಟಕ ನಿರ್ಮಿಸಲಾಗುತ್ತಿದೆ. ಬಿಆರ್‌ಒ ಜೊತೆಗೆ ಎಲ್ ಆಯಂಡ್ ಟಿ ಕಂಪನಿಯು ಇದರ ನಿರ್ಮಾಣಕ್ಕೆ ಕೈಜೋಡಿಸಿದೆ. 'ಈಗಾಗಲೇ ಘಟಕದ ಶೇ 60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದೊಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು' ಎಂದು ಚೌಧರಿ ತಿಳಿಸಿದರು. 'ಈ ಘಟಕದ ಕ್ಯಾಂಪಸ್ 1.98 ಎಕರೆ ವಿಸ್ತೀರ್ಣ ಹೊಂದಿದೆ. ಹಿರಿಯ ಕಿರಿಯ ಹಾಗೂ ಇತರೇ ಅಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆಡಳಿತಾತ್ಮಕ ಕಟ್ಟಡ ಹಾಗೂ ರಕ್ಷಣಾ ಸಾಮಗ್ರಿಗಳ ಸಂಗ್ರಹಕ್ಕೂ ಅವಕಾಶ ಕಲ್ಪಿಸಲಾಗಿದೆ' ಎಂದು ವಿವರಿಸಿದರು.