ಪೆರ್ಲ : ಶುಚಿತ್ವ ವಿಚಾರದಲ್ಲಿ ಅನುದಾನಿತ ಶಾಲೆಗಳು ಒಳಗೊಂಡಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ಅಗತ್ಯ ನೆರವು ಒದಗಿಸಿಕೊಡಲು ಪಂಚಾಯಿತಿ ಬದ್ಧವಾಗಿರುವುದಾಗಿ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ತಿಳಿಸಿದ್ದಾರೆ.
ಅವರು ತ್ಯಾಜ್ಯ ಸಂಸ್ಕರಣೆ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ವತಿಯಿಂದ ನಿರ್ಮಿಸಲಾದ ಮಧ್ಯಾಹ್ನದೂಟದ ತ್ಯಾಜ್ಯ ಬಳಸಿ ಜೈವಿಕ ಗೊಬ್ಬರ ಘಟಕ ತಯಾರಿಸುವ ಬಯೋ ಕಾಂಪೋಸ್ಟ್ ಯೂನಿಟನ್ನು ಉದ್ಘಾಟಿಸಿ ಮಾತನಾಡಿದರು. ತ್ಯಜ್ಯ ನಿರ್ವಹಣೆ ಸಮಾಜದಲ್ಲಿ ಬಲುದೊಡ್ಡ ಸಮಸ್ಯೆಯಾಗಿ ಬದಲಾಗುತ್ತಿದ್ದು, ಪ್ರತಿಯೊಬ್ಬ ತ್ಯಾಜ್ಯ ಸಂಸ್ಕರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರಿಂದ ಮಾತ್ರ ಇದರಿಂದ ಪಾರಾಗಲು ಸಾಧ್ಯ. ಪೆರ್ಲ ಪೇಟೆಯಲ್ಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಕ್ಕಾಗಿ ಪ್ರತ್ಯೇಕ ಬಿನ್ ಅಳವಡಿಸುವ ಬಗ್ಗೆ ಪಂಚಾಯಿತಿ ಚಿಂತನೆ ನಡೆಸಿದೆ. ಶುಚಿತ್ವಮಿಷನ್ ಸಹಯೋಗದೊಂದಿಗೆ ತ್ಯಾಜ್ಯ ಸಂಸ್ಕರಣಾ ಕಾರ್ಯವನ್ನು ಪಂಚಾಯಿತಿ ಯಶಸ್ವಿಯಾಗಿ ನಡೆಸಿಕೊಂಡುಬರುತ್ತಿರುವುದಾಗಿ ತಿಳಿಸಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಎನ್. ಕೇಶವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಉಪಾಧ್ಯಕ್ಷ ನಾರಾಯಣ ನಾಯಕ್, ಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿ ಸುಗಂಧಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕ, ಶಾಲಾ ನೇಚರ್‍ಕ್ಲಬ್ ಸಂಚಾಲಕ ಉಮೇಶ್ ಕೆ. ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕ ವೇಣುಗೋಪಾಲ್ ವಂದಿಸಿದರು.
ಮಧ್ಯಾಹ್ನದ ಊಟದ ಸಂದರ್ಭ ಉಳಿಕೆಯಾಗುವ ಅನ್ನ, ಸಾಂಬಾರ್, ಪಲ್ಯ, ತರಕಾರಿ ತ್ಯಾಜ್ಯ ಸಂಸ್ಕರಿಸಿ ಜೈವಿಕ ಗೊಬ್ಬರವನ್ನಾಗಿಸುವ ನಿಟ್ಟಿನಲ್ಲಿ ಶಾಲಾ ವತಿಯಿಂದ ಸುಮಾರು 75ಲಕ್ಷ ರೂ. ವೆಚ್ಚದಲ್ಲಿ ಬಯೋ ಕಾಂಪೋಸ್ಟ್ ಯೂನಿಟ್ ನಿರ್ಮಿಸಲಾಗಿದೆ.