ಆಗ್ರಾ: ಮಥುರಾ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದ್ದಇಯುಎಂ ರೈಲು ಅವಘಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ರೈಲು ಸಿಬ್ಬಂದಿಯ ಎಡವಟ್ಟಿನಿಂದಲೇ ಇಯುಎಂ ರೈಲು ಪ್ಲಾಟ್‌ಫಾರ್ಮ್ ಏರಿ ಹೋಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿವೆ.
ಆಗಿದ್ದೇನು?
ಮಥುರಾ ಜಂಕ್ಸನ್‌ನಲ್ಲಿ ಮಂಗಳವಾರ ರಾತ್ರಿ ಪ್ರಯಾಣಿಕರನ್ನು ಇಳಿಸಿ ನಿಂತಿದ್ದ ಲೋಕಲ್ ಟ್ರೈನ್ ಅನ್ನು ಅದರ ಲೋಕೊಪೈಲಟ್, ಎಲೆಕ್ಟ್ರಿಕ್ ಹೆಲ್ಪರ್ ಸಿಬ್ಬಂದಿಯ ನಿಗಾಕ್ಕೆ ಬಿಟ್ಟು ಇಳಿದಿದ್ದರು.
ಪಾನಮತ್ತನಾಗಿದ್ದ ಆ ಸಿಬ್ಬಂದಿ ಬ್ಯಾಗ್ ಒಂದನ್ನು ಎಂಜಿನ್ ಹ್ಯಾಂಡಲ್ ಮೇಲೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೊ ಮಾಡುತ್ತಿದ್ದ. ಈ ವೇಳೆ ಬ್ಯಾಗ್‌ನ ಬಾರಕ್ಕೆ ಹ್ಯಾಂಡಲ್ ಮುಂದೆ ಹೋಗಿದೆ. ತಕ್ಷಣವೇ ರೈಲು ವೇಗವಾಗಿ ಮುಂದೆ ಇದ್ದ ತಡೆಗೋಡೆಗೆ ಡಿಕ್ಕಿಯಾಗಿ ಫ್ಲಾಟ್‌ಫಾರ್ಮ್ ಏರಿ ನಿಂತಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.
ಐವರ ಅಮಾನತು
ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದ್ದು ರೈಲಿನ ಸಿಸಿಟಿವಿ ವಿಡಿಯೊದಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉತ್ತರ ಕೇಂದ್ರ ರೈಲ್ವೆ ವಲಯ ಆಗ್ರಾ ವಿಭಾಗದ ಐವರು ಸಿಬ್ಬಂದಿಗಳನ್ನು ಅಮಾನತು ಮಾಡಿದೆ. ಅಧಿಕಾರಿಗಳು ಉನ್ನತ ತನಿಖೆಗೆ ಆದೇಶಿಸಿದ್ದಾರೆ.