HEALTH TIPS

ಸಂವಿಧಾನದ ಮೇಲಿನ ದಾಳಿಗೆ ಪ್ರತಿರೋಧ: ಕೇಂದ್ರದ ವಿರುದ್ಧ 'ಕೈ' ವಾಗ್ದಾಳಿ

             ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯನ್ನು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಖಂಡಿಸಿ, ಅದಕ್ಕೆ ಪ್ರತಿರೋಧ ಒಡ್ಡಬೇಕು ಎಂಬುದೂ ಸೇರಿದಂತೆ ಹಲವು ನಿರ್ಣಯಗಳನ್ನು ಶನಿವಾರ ಇಲ್ಲಿ ಆರಂಭವಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕೈಗೊಳ್ಳಲಾಗಿದೆ.

             ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸಹಕಾರಿ ಒಕ್ಕೂಟದ ತತ್ವಗಳು ಹಾಗೂ ಸಂಪ್ರದಾಯಗಳನ್ನು ನಾಶ ಮಾಡಿದೆ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ. ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಸಹ ಅಂಗೀಕರಿಸಲಾಗಿದೆ.

               'ಜಾತಿ ಅಥವಾ ಧರ್ಮ, ಶ್ರೀಮಂತ ಅಥವಾ ಬಡವ, ಯುವ ಸಮುದಾಯ ಇಲ್ಲವೇ ವಯೋವೃದ್ಧ ಎಂಬ ಭೇದವಿಲ್ಲದೇ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ರಾಷ್ಟ್ರವನ್ನು ಮರುನಿರ್ಮಾಣ ಮಾಡುವ ಶಪಥವನ್ನು ಸಿಡಬ್ಲ್ಯುಸಿ ಮಾಡಿದೆ. 2021ರಲ್ಲಿ ಜನಗಣತಿ ನಡೆಸದೇ ಇರುವುದು ಅವಮಾನಕರ ಸಂಗತಿ ಎಂದೂ ಅಭಿಪ್ರಾಯಪಟ್ಟಿದೆ.

             ಅಲ್ಲದೇ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಹೋರಾಡುವುದಕ್ಕಾಗಿ 'ಇಂಡಿಯಾ' ಮೈತ್ರಿಕೂಟದಡಿ ಎಲ್ಲ ವಿಪಕ್ಷಗಳು ಒಂದುಗೂಡಿರುವುದನ್ನು ಸ್ವಾಗತಿಸಿ ನಿರ್ಣಯ ಕೈಗೊಂಡಿರುವ ಕಾರ್ಯಕಾರಿ ಸಮಿತಿ, 'ಇಂಡಿಯಾ' ರಚನೆಯಿಂದಾಗಿ ಪ್ರಧಾನಿ ಮೋದಿ ಅವರಿಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿದೆ.

               ನಿರುದ್ಯೋಗ, ಅಗತ್ಯವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿರುವ ಬಗ್ಗೆಯೂ ಸಮಿತಿಯು ತನ್ನ ನಿರ್ಣಯದಲ್ಲಿ ಕಳವಳ ವ್ಯಕ್ತಪಡಿಸಿದೆ.

                        ಕಾರ್ಯಕಾರಿ ಸಮಿತಿಯಲ್ಲಿ ಕೈಗೊಂಡ ಇತರ ನಿರ್ಣಯಗಳು ಹೀಗಿವೆ:

* ಸೋಮವಾರದಿಂದ ಆರಂಭವಾಗುವ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು

* ನ್ಯಾಯ ಮತ್ತು ಮುಕ್ತ ಚುನಾವಣೆಗಳನ್ನು ನಡೆಸುವ ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ 'ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ' ಧಕ್ಕೆ ತರಲಿದ್ದು, ವಾಪಸ್‌ ಪಡೆಯಬೇಕು

* ವಿಭಜಕ ರಾಜಕಾರಣದಿಂದ ದೇಶವನ್ನು ಮುಕ್ತಗೊಳಿಸಬೇಕು. 'ಇಂಡಿಯಾ' ಮೈತ್ರಿಕೂಟಕ್ಕೆ ಸೈದ್ಧಾಂತಿಕವಾಗಿ, ಚುನಾವಣೆಗಳಲ್ಲಿ ಯಶಸ್ಸು ತಂದುಕೊಡುವಲ್ಲಿ ಶ್ರಮಿಸಬೇಕು

* ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಪ್ರಸ್ತುತ ಇರುವ ಮೀಸಲಾತಿ ಗರಿಷ್ಠ ಮಿತಿಯನ್ನು ಹೆಚ್ಚಿಸಬೇಕು

                         'ಒಂದು ದೇಶ ಒಂದು ಚುನಾವಣೆ ಒಪ್ಪಲ್'

      'ಒಂದು ದೇಶ ಒಂದು ಚುನಾವಣೆ ಎಂಬ ಆಲೋಚನೆಯನ್ನು ಪಕ್ಷ ತಿರಸ್ಕರಿಸುತ್ತದೆ. ಇದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯಾಗಿದೆ' ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

          ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ 'ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ. ಈ ತಿದ್ದುಪಡಿಗಳನ್ನು ಅಂಗೀಕರಿಸುವುಕ್ಕೆ ಅಗತ್ಯವಿರುವ ಸಂಖ್ಯಾಬಲ ತನಗಿಲ್ಲ ಎಂಬ ಅರಿವು ಬಿಜೆಪಿಗಿದೆ' ಎಂದು ಹೇಳಿದರು.

            'ದೇಶ ಎದುರಿಸುತ್ತಿರುವ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಈ ವಿಷಯನ್ನು ಬಿಜೆಪಿ ಮುನ್ನೆಲೆಗೆ ತಂದಿದೆ' ಎಂದೂ ಟೀಕಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries