ಕಾಸರಗೋಡು: ವಸತಿ ಶಾಲೆ ಚಟುವಟಿಕೆಗಳ ಮೌಲ್ಯಮಾಪನದ ಅಂಗವಾಗಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕುಂಡಂಗುಳಿಯಲ್ಲಿ ಕಾರ್ಯಾಚರಿಸುತ್ತಿರುವ ಸಾವಿತ್ರಿಬಾಯಿ ಫುಲೆ ಸ್ಮಾರಕ ವಸತಿ ಶಾಲೆಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಭೇಟಿ ನೀಡಿ ಅವಲೋಕನ ನಡೆಸಿದರು.
ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಶಾಲೆಯ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ಮಕ್ಕಳಿಗೆ ಪೂರೈಸುವ ನೀರು ಮತ್ತು ಆಹಾರವನ್ನು ಸಕಾಲದಲ್ಲಿ ಪರಿಶೀಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಅಡುಗೆ ಕೆಲಸಗಾರರು ಸಾರ್ವಜನಿಕ ಸಂಸ್ಥೆಗಳಲ್ಲಿ ಅನುಸರಿಸಬೇಕಾದ ಎಲ್ಲ ಷರತ್ತುಗಳನ್ನು ಅನುಸರಿಸಬೇಕು. ಇದಕ್ಕಾಗಿ ಅವರಿಗೆ ಅಗತ್ಯ ತರಬೇತಿ ನೀಡಲಾಗುವುದು.ಕಟ್ಟಡದ ಮೊದಲ ಮಹಡಿಯಲ್ಲಿ ಭದ್ರತಾ ವ್ಯವಸ್ಥೆಯ ಭಾಗವಾಗಿ ಸುರಕ್ಷತಾ ಜಾಲ ಅಳವಡಿಸಲಾಗುವುದು ಎಂದೂ ತಿಳಿಸಿದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ ಕೈನಿಕರ, ಗಿರಿಜನ ಅಭಿವೃದ್ಧಿ ಅಧಿಕಾರಿ ಎಂ. ಮಲ್ಲಿಕಾ, ಆಡಳಿತಾಧಿಕಾರಿ ಕೆ. ವಿ. ರಾಘವನ್ ಮತ್ತಿತರರು ಜಿಲ್ಲಾಧಿಕಾರಿ ಜತೆಗಿದ್ದರು
ಇದೇ ಸಂದರ್ಭ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ವೆಳ್ಳಚ್ಚಾಲ್ ಸರ್ಕಾರಿ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ವಸತಿ, ಅಡುಗೆ ಕೋಣೆ ಹಾಗೂ ಶಾಲಾ ಆವರಣಕ್ಕೆ ಭೇಟಿ ನೀಡಿ ಶುಚಿತ್ವ ಹಾಗೂ ಇತರ ಕಾರ್ಯಕಗಳ ಬಗ್ಗೆ ಅವಲೋಕನ ನಡೆಸಿದರು. ಶಾಲೆಯ ವಸತಿ, ಊಟ ಮತ್ತಿತರ ಸೌಲಭ್ಯಗಳ ಕುರಿತು ಮಕ್ಕಳಿಂದ ಮಾಹಿತಿ ಸಂಗ್ರಹಿಸಿದರು. ಶಾಲೆಯಲ್ಲಿ ಆಟದ ಮೈದಾನ, ಕಟ್ಟಡ ಕಾಮಗಾರಿ ತ್ವರಿತಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ, ಹಿರಿಯ ಅಧೀಕ್ಷಕ ಪಿ.ಬಿ.ಬಶೀರ್, ಮುಖ್ಯಶಿಕ್ಷಕ ಮುಹ್ಸಿನ್ ಜುಬೇರ್ ಉಪಸ್ಥಿತರಿದ್ದರು.