ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ ಹಾಗೂ ಬ್ರಿಟನ್ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
12 ನೇ ಭಾರತ-ಬ್ರಿಟನ್ ಆರ್ಥಿಕ ಹಾಗೂ ಹಣಕಾಸು ಮಾತುಕತೆ ವೇಳೆ ಎಫ್ ಟಿಎ ಬಗ್ಗೆ ಘೋಷಣೆ ಮಾಡಲಾಗಿತ್ತು.
ಬ್ರಿಟನ್ ನ ಖಜಾನೆಯ ಚಾನ್ಸೆಲರ್ ಜೆರೆಮಿ ಹಂಟ್ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಎಫ್ ಟಿಎ ಬಗ್ಗೆ ಖಂಡಿತವಾಗಿಯೂ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಉಭಯ ರಾಷ್ಟ್ರಗಳೂ ಸಾಧ್ಯವಾದಷ್ಟೂ ಶೀಘ್ರವಾಗಿ ಇದನ್ನು ಅಂತಿಮಗೊಳಿಸುತ್ತವೆ ಎಂದು ಹೇಳಿದ್ದಾರೆ.
ಲಂಡನ್ ಸ್ಟಾಕ್ ವಿನಿಮಯ (ಎಲ್ಎಸ್ಇ) ನಲ್ಲಿ ಭಾರತೀಯ ಸಂಸ್ಥೆಗಳನ್ನು ನೇರ ಲಿಸ್ಟ್ ಮಾಡುವುದಕ್ಕೆ ಸಂಬಂಧಿಸಿದ ಪ್ರಗತಿಯನ್ನು ಹಂಟ್ ಶ್ಲಾಘಿಸಿದ್ದಾರೆ. ಪಿಂಚಣಿಗಳು ಮತ್ತು ವಿಮಾ ಪಾಲುದಾರಿಕೆ, ಜ್ಞಾನ ಮತ್ತು ಪರಿಣತಿ-ಹಂಚಿಕೆಗಾಗಿ ಉಪಕ್ರಮಗಳು, ಹೊಸ ಯುಕೆ ಮೂಲಸೌಕರ್ಯ ಹಣಕಾಸು ಸೇತುವೆ ಮತ್ತು ಭಾರತದ ಅಭಿವೃದ್ಧಿಶೀಲ GIFT ಸಿಟಿಯಲ್ಲಿ ಆಳವಾದ ಪಾಲುದಾರಿಕೆಯನ್ನು ಅವರು ಮತ್ತಷ್ಟು ಸ್ಪಷ್ಟವಾಗಿ ಉಲ್ಲೇಖಿಸಿದರು.
"ಸಂಬಂಧವನ್ನು ಬಲಪಡಿಸಲು ನಾವು ಪರಸ್ಪರರ ಯೋಜನೆಗಳನ್ನು ನಿಜವಾಗಿಯೂ ಬೆಂಬಲಿಸಬಹುದು ಮತ್ತು ಇದರ ಮುಂದಿನ ಹಂತವು ಸಮಗ್ರ FTA ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದವಾಗಿದೆ" ಎಂದು ಹಂಟ್ ಹೇಳಿದ್ದಾರೆ.