ಪೆರ್ಲ : ದೇವರ ಮೇಲಿನ ಭಯ ಮತ್ತು ಭಕ್ತಿ ನಮ್ಮನ್ನು ತಪ್ಪು ದಾರಿಯಲ್ಲಿ ನಡೆಯದಂತೆ ನಿಯಂತ್ರಿಸುತ್ತದೆ ಎಂಬುದಾಗಿ ಹಿರಿಯ ಯಕ್ಷಗಾನ ಅರ್ಥಧಾರಿ ಹರೀಶ್ ಬಳಂತಿಮೊಗರು ತಿಳಿಸಿದ್ದಾರೆ. ಅವರು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ನಡೆದ 52ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ಮಾಡಿದರು.
ಧರ್ಮದ ಚೌಕಟ್ಟು ಮೀರಿ ನಡೆದಲ್ಲಿ ಶಾಂತಿಯ ಜೀವನ ಸಾಧ್ಯವಿಲ್ಲ. ಪ್ರಪಂಚದ ಆಗು ಹೋಗುಗಳು ವ್ಯವಸ್ಥಿತವಾಗಿ ನಡೆದುಬರಬೇಕಾದರೆ ಧರ್ಮ ಅತಿ ಮುಖ್ಯ. ಮಕ್ಕಳಲ್ಲಿ ಎಳವೆಯಿಂದಲೇ ಧರ್ಮ ಜಾಗ್ರತಿಯಾಗುವಂತೆ ನೋಡಿಕೊಳ್ಳಬೇಕಾದುದು ಇಂದಿನ ಅನಿವಾರ್ಯ ಎಂದು ತಿಳಿಸಿದರು. ಕಾಸರಗೋಡು ಕಂದಾಯ ಇಲಾಖೆ ತಹಸೀಲ್ದಾರ್ ಉದಯ ಚೆಟ್ಟಿಯಾರ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ವೈದಿಕ ವಿದ್ವಾಂಸ, ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಜಕೂಡ್ಲು ಉಪಸ್ಥಿತರಿದ್ದರು. ಪೆರ್ಲ ಬಾಲ ಭಾರತೀ ವಿದ್ಯಾಲಯದಲ್ಲಿ ಎರಡುವರೆ ದಶಕದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಬಂದಿರುವ 'ಅಕ್ಕಾಜಿ'ಎಂದೇ ಖ್ಯಾತರಾಗಿರುವ ರತ್ನಾವತೀ ಬಿ. ಕೋಟೆ ಅವರನ್ನು ಗೌರವಿಸಲಾಯಿತು. ಸಮಿತಿ ಸದಸ್ಯ ಧೀರಜ್ ಕುಮಾರ್ ಸೈಪಂಗಲ್ಲು ಸ್ವಾಗತಿಸಿದರು. ಉದಯ ಕುಮಾರ್ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಜಿತ್ ರೈ ಬಜಕೂಡ್ಲು ವಂದಿಸಿದರು.