ಕಾಸರಗೋಡು: ಸ್ಪಿಕ್ ಮೆಕೆ ಚಿನ್ಮಯ ಚಾಪ್ಟರ್ ಅಧೀನದಲ್ಲಿ ಚಿನ್ಮಯ ವಿದ್ಯಾಲಯ, ವಿದ್ಯಾನಗರದ ತೇಜಸ್ ಸಭಾಂಗಣದಲ್ಲಿ ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಆರುಷಿ ಮುದುಗಲ್ ಪ್ರಸ್ತುತಪಡಿಸಿದ ಒಡಿಸ್ಸಿ ನೃತ್ಯ ಪ್ರದರ್ಶನವು ಸಾವಿರಾರು ಮಂದಿ ಪ್ರೇಕ್ಷಕರನ್ನು ರಂಜಿಸಿತು. ಒಡಿಸ್ಸಿ ನೃತ್ಯದ ಆಂಗಿಕ ಅಭಿನಯ, ಮುದ್ರೆಗಳು, ಹಾವಭಾವಗಳ ಮೂಲಕ ನರ್ತಕಿ ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ ಭಾಗ್ಯಶ್ರೀ ಪಲ್ಲವಿ, ರಾಧಾ ಕೃಷ್ಣ ಪ್ರಣಾಯ ಸಲ್ಲಾಪ, ದೇವರೊಂದು ನಾಮ ಹಲವು - ಅಹಂ ಬ್ರಹ್ಮಾಸ್ಮಿ ಮುಂತಾದ ಅದ್ಭುತ ಲೀಲೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೂ ಒಡಿಸ್ಸಿ ನೃತ್ಯದ ಕೆಲವೊಂದು ಹೆಜ್ಜೆಗಳನ್ನೂ ಪರಿಚಯಿಸಿದರು.
ಕಲಾವಿದೆ ಆರುಷಿ ಮುದಗಲ್ ಅವರ ನೃತ್ಯಕ್ಕೆ ಸವಾನಿ ಮುದಗಲ್ ಹಾಗೂ ಕುಶಲ್ ಶರ್ಮ ಸಂಗೀತದಲ್ಲೂ ರಜತ್ ಪ್ರಸನ್ನ ಕೊಳಲಿನಲ್ಲೂ ಖರಕ್ ಸಿಂಗ್ ಕೊಳಲಿನಲ್ಲೂ ಸಾಥ್ ನೀಡಿದರು. ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಬ್ರಹ್ಮಚಾರಿಣಿ ರೋಜಿಷಾಜಿ, ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಎಸ್., ಉಪ ಪ್ರಾಂಶುಪಾಲ ಪ್ರಶಾಂತ್ ಬಿ , ಮುಖ್ಯ ಶಿಕ್ಷಕಿಯರಾದ ಪೂರ್ಣಿಮ ಎಸ್. ಆರ್ , ಸಿಂಧು ಶಶೀಂದ್ರನ್ , ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ನೃತ್ಯ ಪ್ರದರ್ಶನಕ್ಕೆ ಸಾಕ್ಷಿಗಳಾದರು.
ಅಜಾ ಫಾತಿಮ ಸ್ವಾಗತಿಸಿದರು. ಶ್ರೀಯ ಅಡಿಗ ನಿರೂಪಿಸಿದರು. ಲೀನ ವಂದಿಸಿದರು.
ಜರ್ಮನಿ, ಫ್ರಾನ್ಸ್. ಆಸ್ಟ್ರೇಲಿಯ, ಯುಕೆ, ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿದ ಆರುಷಿ ಮುದಗಲ್ ಸ್ಪಿಕ್ ಮೆಕೆ ಸಂಘಟನೆಯ ಭಾಗವಾಗಿದ್ದು ಯುವ ಜನರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಸಂಸ್ಕøತಿಯನ್ನು ಪರಿಚಯಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ನೀಡುತ್ತಿದ್ದಾರೆ.