ನ್ಯೂಯಾರ್ಕ್: ಚೀನಾದ ರಕ್ಷಣಾ ಸಚಿವ, ಜನರಲ್ ಲಿ ಶಂಗ್‌ಫು ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ರಹಸ್ಯ ಸ್ಥಳದಲ್ಲಿರಿಸಿ ಚೀನಾ ತನಿಖೆಗೆ ಒಳಪಡಿಸಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಮೆರಿಕದ ಇಬ್ಬರು ಉನ್ನತ ಅಧಿಕಾರಿಗಳು ಹೇಳಿರುವುದಾಗಿ 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಚೀನಾದ ಅಣ್ವಸ್ತ್ರ ಪಡೆಯ ಉಸ್ತುವಾರಿ ವಹಿಸಿದ್ದ ಇಬ್ಬರು ಉನ್ನತ ಕಮಾಂಡರ್‌ಗಳನ್ನು ಹಠಾತ್ ತೆಗೆದುಹಾಕಿದ ನಂತರ, ಸೇನಾ ದಂಗೆಯ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ. ಈ ತನಿಖೆಯು ಕಮ್ಯುನಿಸ್ಟ್ ಪಕ್ಷದ ನಾಯಕ ಷಿ ಜಿನ್‌ಪಿಂಗ್ ಅವರು ಸೇನೆ ಮೇಲೆ ಇಟ್ಟಿರುವ ವಿಶ್ವಾಸ, ವಿದೇಶಗಳಲ್ಲಿ ಪ್ರಭಾವ ಬೀರುವ ಮಹತ್ವಾಕಾಂಕ್ಷೆ ಮತ್ತು ಸ್ವದೇಶದಲ್ಲಿ ಅವರ ಪ್ರಾಬಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
'ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ಬಹುತೇಕ ಖರೆ. ಇದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ಗೆ ಮುಖಭಂಗವೇ. ಇದನ್ನು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಚೀನಿ ಜನತೆ ಗಮನಿಸುತ್ತಾರೆ. ಷಿ ಜಿನ್‌ಪಿಂಗ್ ಅವರನ್ನು ಅಧಿಕಾರದಿಂದ ಕೆಳಗಿಳಿಯಲು ಜನರು ಒತ್ತಾಯಿಸದಿದ್ದರೂ ಒಬ್ಬ ಆಡಳಿತಗಾರನಾಗಿ ಜಿನ್‌ಪಿಂಗ್ ಅವರ ಪ್ರತಿಷ್ಠೆಯನ್ನು ಈ ಬೆಳವಣಿಗೆ ಹಾಳು ಮಾಡಲಿದೆ' ಎಂದು ತೈಪೆಯ ಚಿಂತಕರ ಚಾವಡಿ ಎನಿಸಿದ ನ್ಯಾಷನಲ್ ಡಿಫೆನ್ಸ್ ಆಯಂಡ್ ಸೆಕ್ಯುರಿಟಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯ ವಿಷಯ ತಜ್ಞರಾದ ಸು ತ್ಸು-ಯುನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡು ವಾರಗಳಿಗಿಂತಲೂ ಹೆಚ್ಚು ಸಮಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಲಿ ಅವರು ಸದ್ಯ ಎಲ್ಲಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರು ಪ್ರಶ್ನಿಸಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.