ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಚೌ ಗ್ರಾಮದ ದೇವಸ್ಥಾನ ಎಂದೇ ಖ್ಯಾತಿ ಪಡೆದಿರುವ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನಕ್ಕೆ ಪುತ್ತೂರಿನ ಶಾಸಕ ಆಶೋಕ್ ಕುಮಾರ್ ರೈ ಭೇಟಿ ನೀಡಿದರು. ವಿಧಾನ ಸಭಾ ಚುನಾವಣಾ ಸಂದರ್ಭ ಇವರ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದ ಹರಿಕೆ ಸಲ್ಲಿಸುವ ನಿಟ್ಟಿನಲ್ಲಿ ಕಾಟುಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ಸಂದರ್ಭ ಕಾಟುಕುಕ್ಕೆಯ ಅಶೋಕ್ ರೈ ಅಭಿಮಾನಿ ಬಳಗದ ಪರವಾಗಿ ಪೌರ ಸನ್ಮಾನ ನಡೆಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲು, ಮಾಜಿ ಆಡಳಿತ ಮೊಕ್ತೇಸರ ನಾರಾಯಣ, ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಭಟ್ ಮಿತ್ತೂರು ಉಪಸ್ಥಿತರಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸ್ವಾಗತಿಸಿದರು. ದೀಪಕ್ ಭಂಡಾರದ ಮನೆ ವಂದಿಸಿದರು.
ಈ ಸಂದರ್ಭ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ಸುಬ್ರಾಯದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕರ್ನಾಟಕ ಸರ್ಕಾರದಿಂದ ಪೂರಕ ಯೋಜನೆಗಳನ್ನು ಒದಗಿಸಿಕೊಡುವಂತೆ ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲು ಮನವಿ ಮೂಲಕ ಆಗ್ರಹಿಸಿದರು. ಜತೆಗೆ ಅಡ್ಕಸ್ಥಳ-ಕಾಟುಕುಕ್ಕೆ ಮೂಲಕ ಆರ್ಲಪದವು ಹಾದಿಯಾಗಿ ಪುತ್ತೂರಿಗೆ ಸರ್ಕಾರಿ ಬಸ್ ಮಂಜೂರುಗೊಳಿಸುವಂತೆ ಆಗ್ರಹಿಸಿ ನಾಗರಿಕ ಪರವಾಗಿ ಬಿ.ಎಸ್.ಗಾಂಭೀರ್ ಶಾಸಕರಿಗೆ ಮನವಿ ಸಲ್ಲಿಸಿದರು.