ತಿರುವನಂತಪುರಂ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಜಾಪ್ರಭುತ್ವ ಶಕ್ತಿಗಳು ಈ ಕ್ರಮವನ್ನು ವಿರೋಧಿಸಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಸಂಘಪರಿವಾರದ 'ಒಂದು ರಾಷ್ಟ್ರ, ಒಂದು ಚುನಾವಣೆ' ಘೋಷಣೆಯು 'ಭಾರತದ ಕಲ್ಪನೆ', ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅದರ ಸಾಂವಿಧಾನಿಕ ತತ್ವಗಳಿಗೆ ಬೆದರಿಕೆಯಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಫೆಡರಲ್ ರಚನೆಯನ್ನು ಹಾಳುಮಾಡುತ್ತದೆ ಮತ್ತು ಕೇಂದ್ರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರತದ ಸಂಸದೀಯ ವ್ಯವಸ್ಥೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿರುವ ರಾಜ್ಯಸಭೆಯ ಪ್ರಸ್ತುತತೆಯನ್ನು 'ಒಂದು ರಾಷ್ಟ್ರ, ಒಂದು ಚುನಾವಣೆ' ಕ್ರಮದ ಮೂಲಕ ಪ್ರಶ್ನಿಸಿದಂತಾಗುತ್ತದೆ ಎಂದು ಪಿಣರಾಯಿ ಹೇಳಿದರು.
ವಿವಿಧ ಹಂತಗಳಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗಳು ರಾಜ್ಯಸಭೆಯ ರಚನೆಯನ್ನು ನಿರ್ಧರಿಸುತ್ತವೆ. ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ರಾಜ್ಯಸಭೆಯಲ್ಲಿನ ರಾಜಕೀಯ ವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಸಂಘಪರಿವಾರ ಮುಂದಾಗಿರುವುದು ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಸೋಲು ಲೋಕಸಭೆಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಘಪರಿವಾರಕ್ಕೆ ತಿಳಿದಿದೆ ಎಂದು ಅವರು ಹೇಳಿದರು.
ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಭಾರತವನ್ನು ಕೊನೆಗಾಣಿಸುವ ಸಂಘಪರಿವಾರದ ನಡೆಗಳನ್ನು ಎಲ್ಲ ರೀತಿಯಿಂದಲೂ ವಿರೋಧಿಸಬೇಕು. ದೇಶದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ವೈವಿಧ್ಯತೆಯನ್ನು ಕೊನೆಗಾಣಿಸುವ ಇಂತಹ ಪ್ರಯತ್ನಗಳನ್ನು ವಿರೋಧಿಸಲು ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳು ಮುಂದಾಗಬೇಕು ಎಂದು ಪಿಣರಾಯಿ ಹೇಳಿದರು.