ನವದೆಹಲಿ :ಭಾರತೀಯ ಬಾಲಕನೊಬ್ಬ ಜಗತ್ತಿನಲ್ಲೆ ಅತೀ ಉದ್ದದ ಕೂದಲು ಹೊಂದಿರುವ ಬಾಲಕ ಎಂದು ಗಿನ್ನೀಸ್ ದಾಖಲೆ ನಿರ್ಮಿಸಿದ್ದಾನೆ.
ಪಂಜಾಬ್‌ನ ಸಿದ್ದಕ್‌ದೀಪ್ ಸಿಂಗ್ ಚಹಾಲ್ ಎನ್ನುವ 15 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ. ಸಿದ್ದಕ್‌ದೀಪ್ ಸಾಧನೆ ಕುರಿತ ವಿಡಿಯೊ ಮಾಹಿತಿಯನ್ನು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ X ನಲ್ಲಿ ಹಂಚಿಕೊಂಡಿದೆ.
ಸಿದ್ದಕ್‌ದೀಪ್ ಕೂದಲು 4.26 ಅಡಿ ಉದ್ದ ಅಂದರೆ 130 ಸೆಂಟಿಮೀಟರ್ ಉದ್ದ ಬೆಳೆದಿದ್ದು, ಕೂದಲನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ನಾನು ನನ್ನ ಜೀವನದಲ್ಲಿ ಎಂದೂ ಕೂದಲನ್ನು ಕತ್ತರಿಸಲಿಲ್ಲ. ಏಕೆಂದರೆ ಸಿಖ್ ಧಾರ್ಮಿಕತೆಯ ಪ್ರಕಾರ ನಾನು ಕೂದಲನ್ನು ಕತ್ತರಿಸದೇ ಹಾಗೇ ಬಿಟ್ಟೆ. ಕ್ರಮೇಣ ಹೆಚ್ಚಾಗುತ್ತಾ ಹೋದರೂ ನಾನು ಕತ್ತರಿಸದಿರಲು ನಿರ್ಧರಿಸಿದೆ. ಈಗ ಅದು ವಿಶ್ವ ದಾಖಲೆಯಾಗಿರುವುದು ಸಂತೋಷ ನೀಡುತ್ತಿದೆ ಎಂದು ಸಿದ್ದಕ್‌ದೀಪ್ ಹೇಳಿದ್ದಾರೆ.
ನನ್ನ ಕೂದಲನ್ನು ತೊಳೆಯಲು ಕನಿಷ್ಠ 20 ನಿಮಿಷ ಬೇಕಾಗುತ್ತದೆ. ತೊಳೆದ ಮೇಲೆ ಒಣಗಿಸಿ ಕಟ್ಟಿಕೊಳ್ಳಲು ಸುಮಾರು ಅರ್ಧ ಗಂಟೆಯಾಗುತ್ತದೆ. ಇದನ್ನೆಲ್ಲ ನನ್ನ ತಾಯಿಯೇ ಮಾಡುತ್ತಾರೆ. ಅವರಿಗೆ ಈ ಗೌರವ ಸಲ್ಲಬೇಕು. ಕೂದಲನ್ನು ಈ ರೀತಿ ಕಾಪಾಡಿಕೊಳ್ಳುವುದು ಕಠಿಣವಾದರೂ ಅದಕ್ಕೆ ತಕ್ಕುದಾದ ಗೌರವ ಸಿಕ್ಕಿದೆ ಎಂದು ಹೇಳಿದ್ದಾರೆ.
ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಬಾಲಕನ ಸಂದರ್ಶಿಸಿ ವಿಡಿಯೊ ಮಾಡಿ ಪುರಸ್ಕಾರ, ಪ್ರಮಾಣಪತ್ರ ನೀಡಿ ಗೌರವಿಸಿದೆ.