ಮುಂಬೈ: ಇಂಟರ್‌ಪೋಲ್ ನೀಡಿದ ಎಚ್ಚರಿಕೆಯಿಂದಾಗಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.
ಆತ್ಮಹತ್ಯೆಯ ಅತ್ಯುತ್ತಮ ವಿಧಾನಗಳ ಕುರಿತು ಗೂಗಲ್‌ನಲ್ಲಿ ಈ ಯುವಕ ಹುಡುಕಾಟ ನಡೆಸುತ್ತಿದ್ದ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
'ರಾಜಸ್ಥಾನದ 28 ವರ್ಷದ ಈ ಯುವಕ, ಮಾಲಾಡ್ ವೆಸ್ಟ್‌ನ ಮಾಲವಾನಿಯ ನಿವಾಸಿ. ಆತ್ಮಹತ್ಯೆ ವಿಧಾನಗಳ ಕುರಿತು ಅನೇಕ ಬಾರಿ ಗೂಗಲ್‌ನಲ್ಲಿ ಶೋಧಿಸಿದ್ದ. ಇದು ಇಂಟರ್‌ಪೋಲ್ ಅಧಿಕಾರಿಗಳ ಗಮನ ಸೆಳೆದಿತ್ತು. ಕೂಡಲೇ ಅವರು ಯುವಕನ ಮೊಬೈಲ್ ಸಂಖ್ಯೆ ಸಹಿತ ಮುಂಬೈ ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದರು. ಮೊಬೈಲ್ ಸಂಖ್ಯೆ ಆಧಾರದ ಮೇಲೆ ಮುಂಬೈ ಪೊಲೀಸರು ಆತನನ್ನು ಮಂಗಳವಾರ ಪತ್ತೆ ಮಾಡಿದ್ದಾರೆ' ಎಂದರು.
'ಯುವಕನನ್ನು ವಶಕ್ಕೆ ಪಡೆದು, ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಲಾಗಿದೆ. ಆತನಿಗೆ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸಲು ಸೂಚಿಸಲಾಗಿದೆ' ಎಂದು ವಿವರಿಸಿದರು.
ಖಿನ್ನತೆಯಲ್ಲಿದ್ದ ಯುವಕ: 'ಎರಡು ವರ್ಷಗಳ ಹಿಂದೆ ಅಪರಾಧ ಪ್ರಕರಣವೊಂದ
ರಲ್ಲಿ ಯುವಕನ ತಾಯಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ತನ್ನ ತಾಯಿ ಬಿಡುಗಡೆ ಮಾಡಿಸಲು ಸಾಧ್ಯವಾಗುತ್ತಿಲ್ಲವೆಂಬ ಚಿಂತೆಯು ಯುವಕನನ್ನು ಖಿನ್ನತೆಗೆ ದೂಡಿತ್ತು. ಜತೆಗೆ ಈತನೂ ಕಳೆದ ಆರು ತಿಂಗಳಿಂದ ನಿರುದ್ಯೋಗಿಯಾಗಿದ್ದ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಮಾರ್ಗವೆಂದು ತಿಳಿದು, ಆತ ಗೂಗಲ್‌ನಲ್ಲಿ ಶೋಧ ನಡೆಸಿದ್ದ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.