ಬ್ರಿಟನ್: ಖಾಲಿಸ್ತಾನಿ ಭಯೋತ್ಪಾದಕ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಬೆನ್ನಲ್ಲೇ ಬ್ರಿಟನ್‌ನ ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗ್ಲಾಸ್ಕೊದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ವ್ಯಕ್ತಿಗಳಿಬ್ಬರು ತಡೆದಿದ್ದಾರೆ.

ಗುರುದ್ವಾರ ವ್ಯವಸ್ಥಾಪಕ ಸಮಿತಿಯು ವಿಕ್ರಮ್ ದೊರೈಸ್ವಾಮಿಯವರನ್ನು ಆಹ್ವಾನಿಸಿತ್ತು. ಆಹ್ವಾನದ ಮೇರೆಗೆ ದೊರೈಸ್ವಾಮಿ ಅವರು ಗುರುದ್ವಾರಕ್ಕೆ ಬಂದಿದ್ದರು. ಈ ವೇಳೆ ಖಾಲಿಸ್ತಾನಿ ಪರ ಎನ್ನಲಾದ ವ್ಯಕ್ತಿಗಳು ದೊರೈಸ್ವಾಮಿ ಅವರನ್ನು ಕಾರಿನಿಂದ ಕೆಳಗಿಳಿಯದಂತೆ ತಡೆದಿದ್ದಾರೆ.
ಈ ಕುರಿತಂತೆ 'ಸಿಖ್ ಯುತ್ ಯುಕೆ' ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದೆ. 'ಭಾರತೀಯ ರಾಜತಾಂತ್ರಿಕರಿಗೆ ಗುರುದ್ವಾರ ಪ್ರವೇಶವನ್ನು ನಿರಾಕರಿಸಲಾಯಿತು. ಸಿಖ್ ನೌಜವಾನ್‌ಗಳು ಅವರನ್ನು ತಡೆದು ಗುರುದ್ವಾರದಿಂದ ಹೊರಡುವಂತೆ ಹೇಳಿದರು' ಎಂದು ಬರೆದುಕೊಂಡಿದೆ.
ಪಾರ್ಕಿಕ್ ಪ್ರದೇಶದಲ್ಲಿ ಕಾರು ನಿಲ್ಲುತ್ತಿದ್ದಂತೆ ವ್ಯಕ್ತಿಗಳಿಬ್ಬರು ಅಲ್ಲಿಗೆ ಧಾವಿಸಿ ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ. ತಕ್ಷಣ ರಾಜತಾಂತ್ರಿಕ ಅಧಿಕಾರಿ ಕಾರು ಅಲ್ಲಿಂದ ತೆರಳಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಜತಾಂತ್ರಿಕರನ್ನು ನಡೆಸಿಕೊಂಡ ರೀತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
'ಗುರುದ್ವಾರಕ್ಕೆ ಭೇಟಿ ನೀಡುವ ಯಾವುದೇ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೀಗೆ ನಡೆಸಿಕೊಳ್ಳಲಾಗುವುದು' ಎಂದು ವ್ಯಕ್ತಿಯೊಬ್ಬ ಕ್ಯಾಮೆರಾ ಮುಂದೆ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.