ನವದೆಹಲಿ: ಅಪ್ರಾಪ್ತ ವಯಸ್ಕರು ಹಾಗೂ ಮಕ್ಕಳ ಲಿಂಗ ಆಯ್ಕೆ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಕರಡು ನೀತಿಯ ಸ್ಥಿತಿ ಕುರಿತು ನವೀಕೃತ ವರದಿಯನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.
ನವದೆಹಲಿ: ಅಪ್ರಾಪ್ತ ವಯಸ್ಕರು ಹಾಗೂ ಮಕ್ಕಳ ಲಿಂಗ ಆಯ್ಕೆ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಕರಡು ನೀತಿಯ ಸ್ಥಿತಿ ಕುರಿತು ನವೀಕೃತ ವರದಿಯನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.
2022 ಸೆ. 27ರ ಹೈಕೋರ್ಟ್‌ನ ಆದೇಶವನ್ನು ಪಾಲಿಸದ ಆರೋಪದ ಮೇಲೆ ದೆಹಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್ ಈ ಆದೇಶ ನೀಡಿದೆ.
ವಿಚಾರಣೆ ಸಂದರ್ಭದಲ್ಲಿ ದೆಹಲಿ ಸರ್ಕಾರದ ಪರ ವಕೀಲರು, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ (ಎಂಎಎಂಸಿ) ಡೀನ್ ಅಧ್ಯಕ್ಷತೆಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು (ಡಿಜಿಎಚ್‌ಎಸ್) ಇಂತಹ ಕರಡು ರಚನೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೆಹಲಿಯ ಮಕ್ಕಳ ರಕ್ಷಣಾ ಆಯೋಗವು ಮಾಡಿದ ಶಿಫಾರಸುಗಳ ಆಧಾರದಲ್ಲಿ ಲಿಂಗ ಆಯ್ಕೆ ಶಸ್ತ್ರಚಿಕಿತ್ಸೆಗಳ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ದೆಹಲಿ ಸರ್ಕಾರಕ್ಕೆ ಹೈಕೋರ್ಟ್ 8 ವಾರಗಳ ಕಾಲಾವಕಾಶವನ್ನು ಕಲ್ಪಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು, '2023ರ ಆ. 25ರ ಪತ್ರವನ್ನು ಗಮನದಲ್ಲಿಟ್ಟುಕೊಂಡು ನಾನು ನಿಮಗೆ ನಿಂದನೆಯ ನೋಟಿಸ್ ನೀಡುತ್ತಿಲ್ಲ. ಕರಡು ನೀತಿಯ ಸ್ಥಿತಿ ಸೂಚಿಸುವ ನವೀಕೃತ ವರದಿಯನ್ನು ಸಲ್ಲಿಸಲು ದೆಹಲಿ ಸರ್ಕಾರಕ್ಕೆ 8 ವಾರಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಸರ್ಕಾರವು ಈ ವಿಷಯವನ್ನು ಪಟ್ಟಿ ಮಾಡಲಿ' ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜೀವಕ್ಕೆ ಅಪಾಯಕಾರಿಯಾಗುವ ಸಂದರ್ಭಗಳನ್ನು ಹೊರತುಪಡಿಸಿ ಅಪ್ರಾಪ್ತ ವಯಸ್ಕರು ಮತ್ತು ಮಕ್ಕಳ ಮೇಲೆ ಅನಗತ್ಯವಾಗಿ ಮಾಡಲಾಗುವ ಲಿಂಗತ್ವ ಆಯ್ಕೆ ಶಸ್ತ್ರಚಿಕಿತ್ಸೆಗಳನ್ನು ನಿಷೇಧಿಸಬೇಕು ಎಂದು ದೆಹಲಿಯ ಮಕ್ಕಳ ರಕ್ಷಣಾ ಆಯೋಗವು ಶಿಫಾರಸು ಮಾಡಿದೆ.