ಕಣ್ಣೂರು: ಕಣ್ಣೂರು ಜಿಲ್ಲೆಯ ಮಲೆನಾಡು ಪ್ರದೆಶದಲ್ಲಿ ಸಶಸ್ತ್ರಧಾರಿ ನಕ್ಸಲರ ತಂಡವೊಂದು ಕಂಡುಬಂದಿದ್ದು, ಇದರಿಂದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಎದುರಾಗಿದೆ. ವರ್ಷಗಳ ಹಿಂದೆ ಮಲಪ್ಪುರಂ ಜಿಲ್ಲೆಯ ನಿಲಂಬೂರ್, ತಮಿಳ್ನಾಡಿಗೆ ಹೊಂದಿಕೊಂಡಿರುವ ಕೇರಳದ ಮಲೆನಾಡು ಜಿಲ್ಲೆಗಳಲ್ಲಿ ನಕ್ಸಲರ ಸಂಚಾರ ಹಾಗೂ ನಿಲಂಬೂರಿನಲ್ಲಿ ನಕ್ಸಲ್ ಹಾಗೂ ಪೊಲೀಸರ ಮಧ್ಯೆ ನಡೆದ ಘರ್ಷಣೆ ನಂತರ ಅಲ್ಪ ಕಡಿಮೆಯಾಗಿದ್ದ ನಕ್ಸಲ್ ಭೀತಿ ಮತ್ತೆ ತಲೆಯೆತ್ತಿದೆ.
ಪ್ರಸಕ್ತ ಕಣ್ಣೂರಿನ ಕೇಳಗಂ ಅಡೈಕ್ಕತ್ತೋಡ್ ಪ್ರದೇಶದಲ್ಲಿ ಐದು ಮಂದಿಯನ್ನೊಳಗೊಂಡ ಸಶಸ್ತ್ರಧಾರಿ ನಕ್ಸಲರ ತಂಡ ಎರಡು ದಿವಸಗಳಲ್ಲಾಗಿ ಕಾಣಿಸಿಕೊಂಡಿದ್ದಾರೆ. ಸೆ. 14ರಂದು ಸಂಜೆ ಇಲ್ಲಿನ ರಾಮಚ್ಚಿಯಿಲ್ ಕುರಿಚ್ಯ ಕಾಲನಿಗೆ ಆಗಮಿಸಿದ ನಕ್ಸಲರ ತಂಡ ರಾತ್ರಿ ಹತ್ತರ ವರೆಗೂ ಸ್ಥಳದಲ್ಲಿದ್ದರು. ಈ ಮಧ್ಯೆ ಅಕ್ಕಿ ಸೇರಿದಂತೆ ವಿವಿಧ ಅಗತ್ಯ ಸಾಮಗ್ರಿ ಖರೀದಿಸಿರುವುದಲ್ಲದೆ, ಆಹಾರ ಸಿದ್ಧಪಡಿಸಿ ಸೇವಿಸಿರುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಅಯ್ಯನ್‍ಕುನ್ನು, ಆರಳಂ, ಕೇಳಗಂ ಪ್ರದೇಶದಲ್ಲಿ ಈ ಹಿಂದೆಯೂ ನಕ್ಸಲರ ಸಂಚಾರವಿರುವುದನ್ನು ಪತ್ತೆಹಚ್ಚಲಾಗಿತ್ತು. ಕಳೆದ ಮೂರು ತಿಂಗಳಲ್ಲಿ ಇದು ನಕ್ಸಲರ ಎರಡನೇ ಭೇಟಿಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಈ ಪ್ರದೇಶದಲ್ಲಿ ಪೊಲೀಸ್ ಕಾವಲು ಬಲಪಡಿಸಲಾಗಿದೆ. ಸ್ಥಳೀಯ ಜನತೆ ಜೀವಬೆದರಿಕೆ ಹಿನ್ನೆಲೆಯಲ್ಲಿ ಮಾಹಿತಿ ಹೊರಹಾಕುತ್ತಿಲ್ಲ ಎಂಬುದಾಗಿ ಪೊಲೀಸರು ತಿಳಿಸುತ್ತಾರೆ.