ನವದೆಹಲಿ: ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.
ರಾಜಕೀಯ ಪಕ್ಷದವರು ಏನನ್ನಾದರೂ ಹೇಳಿದರೆ ಅದನ್ನೇ INDIA ಮೈತ್ರಿ ಪಕ್ಷವು ನಂಬುತ್ತದೆ ಎಂದು ಅರ್ಥವಲ್ಲ. ನಾನು ಸನಾತನ ಧರ್ಮದಿಂದ ಬಂದವನು. ಅಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಅಲ್ಲದೆ ವಿರೋಧಿಸುತ್ತೇನೆ. ಇಂತಹ ಹೇಳಿಕೆಗಳನ್ನು ನೀಡಬಾರದು. ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡುವುದನ್ನು ತಪ್ಪಿಸಬೇಕು. ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಈ ವಿಷಯದ ಬಗ್ಗೆ 'INDIA' ಮೈತ್ರಿಯ ಮೇಲೆ ದಾಳಿ ಮಾಡುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳ ಮೈತ್ರಿಕೂಟವು ಗುಪ್ತ 'ಅಜೆಂಡಾ' ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕ, ಯಾವುದೇ ಪಕ್ಷದ ನಾಯಕರೊಬ್ಬರು ಇಂತಹ ಕಾಮೆಂಟ್ ಮಾಡಿದ ಮಾತ್ರಕ್ಕೆ... ಅದು ಮೈತ್ರಿಯ ಹೇಳಿಕೆ ಎಂದು ಅರ್ಥವಲ್ಲ. ಹಣದುಬ್ಬರ ಮತ್ತು ನಿರುದ್ಯೋಗದಂತಹ ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳನ್ನು ಎತ್ತಲು ಮೈತ್ರಿ ರಚಿಸಲಾಗಿದೆ. ಯಾರೋ ಒಬ್ಬ ಸಣ್ಣ ನಾಯಕ ನೀಡಿದ ಹೇಳಿಕೆಯು ಮೈತ್ರಿಕೂಟದ ಅಧಿಕೃತ ನಿಲುವು ಅಲ್ಲ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ಒಗ್ಗಟ್ಟಿನಿಂದ ಎದುರಿಸಲು ಎರಡು ಡಜನ್‌ಗಿಂತಲೂ ಹೆಚ್ಚು ವಿರೋಧ ಪಕ್ಷಗಳು 'INDIA' ಮೈತ್ರಿಯನ್ನು ರಚಿಸಿವೆ. ರಾಘವ್ ಚಡ್ಡಾ 14 ಸದಸ್ಯರ ಸಮನ್ವಯ ಸಮಿತಿಯ ಸದಸ್ಯರೂ ಆಗಿದ್ದಾರೆ. ಇದು 'INDIA' ಮೈತ್ರಿಕೂಟದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ನಾಳೆ ದೆಹಲಿಯ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಸಮಿತಿಯ ಸಭೆ ನಡೆಯಲಿದೆ.