ಕಾಸರಗೋಡು: ಎಡರಂಗ ಸರ್ಕಾರದ ಮದ್ಯ ನೀತಿ ವಿರುದ್ಧ ಮಹಿಳಾ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು. ಮಧೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಬಿಜೆಪಿ ನೇತಾರೆ ಸುಜ್ಞಾನಿ ಶ್ಯಾನ್‍ಬಾಗ್ ಧರಣಿ ಉದ್ಘಾಟಿಸಿ ಮಾತನಾಡಿ, ಹಂತ ಹಂತವಾಗಿ ಮದ್ಯ ಮಾರಾಟ ಕಡಿತಗೊಳಿಸುವ ಭರವಸೆಯೊಂದಿಗೆ ಆಡಳಿತಕ್ಕೇರಿದ್ದ ಎಡರಂಗ ಸರ್ಕಾರ, ಇಂದು ಮದ್ಯದಂಗಡಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಾಜ್ಯವನ್ನು ಮದ್ಯಪಾನಿಗಳ ನಾಡಾಗಿ ಬದಲಾಯಿಸಲು ಹೊರಟಿದೆ. ಯುವಜನತೆಯನ್ನು ಮದ್ಯದ ದಾಸರನ್ನಾಗಿಸಲು ಹೊರಟಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ತಿಳಿಸಿದರು.
ಮಹಿಳಾ ಐಕ್ಯವೇದಿ ಜಿಲ್ಲಾಧ್ಯಕ್ಷೆ ವಸಂತಿ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಐಕ್ಯವೇದಿ ಜಿಲ್ಲಾ ಸಂಯೋಜಕ ಮೋಹನನ್ ಪಯಕ್ಕಾಡ್, ಮಹಿಳಾ ಐಕ್ಯವೇದಿ ಮುಖಂಡರಾದ ಸತಿ ಕೋಡೋತ್, ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರಿ, ದಿವ್ಯಾ ಗಟ್ಟಿ ಪಾರೆಕಟ್ಟ, ಹಿಂದೂ ಐಕ್ಯವೇದಿ ಮುಖಂಡರಾದಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಪಿ. ಶಾಜಿ, ಶ್ರೀಕಂಠನ್ ನಾಯರ್, ಮುಖಂಡರಾದ ರಾಜನ್ ಮುಳಿಯಾರ್, ರಾಮನ್ ಉದಯಗಿರಿ ಉಪಸ್ಥಿತರಿದ್ದರು. ಮಹಿಳಾ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಸುಜಾತಾ ಸ್ವಾಗತಿಸಿದರು. ಅಜಿತಾ ಅನಂತಪುರಂ ವಂದಿಸಿದರು.