ಅಹಮದಾಬಾದ್: ಘೋಷಿತ ಖಾಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್‌ನ (ಎಸ್‌ಜೆಎಫ್) ಗುರುಪತ್ವಂತ್ ಸಿಂಗ್ ಪನ್ನೂ ವಿರುದ್ಧ ಅಹಮದಾಬಾದ್‌ನ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.
'ಕ್ರಿಕೆಟ್ ವಿಶ್ವ ಕಪ್ ಅಂಗವಾಗಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು 'ವಿಶ್ವ ಟೆರರ್ ಕಪ್' ಆಗಿ ಮಾಡುವುದಾಗಿ ಪೊಲೀಸರು, ವಕೀಲರು ಹಾಗೂ ಪತ್ರಕರ್ತರು ಸೇರಿದಂತೆ ಕನಿಷ್ಠ 60 ಜನರಿಗೆ ಧ್ವನಿಮುದ್ರಿತ ಕರೆಗಳನ್ನು ಮಾಡಿದ್ದ' ಆರೋಪದಡಿ ಪನ್ನೂ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
'ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26 ಮತ್ತು 27ರ ನಡುವೆ ಗುಜರಾತ್ ಪ್ರವಾಸದಲ್ಲಿದ್ದ, ಪನ್ನೂ ಈ ಧ್ವನಿಮುದ್ರಿತ ಕರೆಗಳನ್ನು ಮಾಡಿದ್ದ' ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸೈಬರ್ ಸೆಲ್‌ನ ಸಬ್ ಇನ್ಸ್‌ಪೆಕ್ಟರ್ ಎಚ್.ಎನ್.ಪ್ರಜಾಪತಿ ಅವರು ನೀಡಿರುವ ದೂರಿನ ಅನ್ವಯ ಈ ಎಫ್‌ಐಆರ್ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 121 (ಭಾರತದ ವಿರುದ್ಧ ಯುದ್ಧ ಸಾರುವುದು), 153ಎ (ವಿವಿಧ ಗುಂಪುಗಳ ನಡುವೆ ವೈರತ್ವ ಬೆಳೆಸುವುದು), 120ಬಿ (ಕ್ರಿಮಿನಲ್ ಪಿತೂರಿ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
'ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 5ರಂದು ಕ್ರಿಕೆಟ್ ವಿಶ್ವ ಕಪ್‌ನ ಆರಂಭದ ಬದಲಾಗಿ 'ವರ್ಲ್ಡ್ ಟೆರರ್ ಕಪ್'ನ ಆರಂಭವಾಗಲಿದೆ. ಅಹಮದಾಬಾದ್‌ನಲ್ಲಿ ಎಸ್‌ಜೆಎಫ್ ಖಾಲಿಸ್ತಾನ ಬಾವುಟವನ್ನು ಹಾರಿಸಲಿದೆ. ನಿಜ್ಜರ್ ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ' ಎಂದು ಧ್ವನಿಮುದ್ರಿತ ಕರೆಯಲ್ಲಿ ಹೇಳಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗದೆ.
'ನಿಮ್ಮ ಮತಪತ್ರಗಳ ವಿರುದ್ಧ ನಾವು ಗುಂಡುಗಳನ್ನು ಬಳಸುತ್ತೇವೆ. ನಿಮ್ಮ ಹಿಂಸೆಯ ವಿರುದ್ಧ ನಾವು ಮತಗಳನ್ನು ಬಳಸುತ್ತೇವೆ. ಇದು ಗುರುಪತ್ವಂತ್ ಸಿಂಗ್ ಪನ್ನೂನಿಂದ ಬಂದ ಸಂದೇಶ' ಎಂಬುದಾಗಿ ಕರೆಯಲ್ಲಿ ಹೇಳಲಾಗಿದೆ ಎಂದೂ ಎಫ್‌ಐಆರ್‌ನಲ್ಲಿದೆ.
'447418343648 ಸಂಖ್ಯೆಯಿಂದ ಬಂದಿದ್ದ ಈ ಧ್ವನಿಮುದ್ರಿತ ಬೆದರಿಕೆ ಕರೆಯನ್ನು ದೇಶದಾದ್ಯಂತ ಅನೇಕ ಜನರು ಸ್ವೀಕರಿಸಿದ್ದಾರೆ' ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್‌ನ ಹಲವು ಪತ್ರಕರ್ತರಿಗೆ ಕೆಲ ತಿಂಗಳ ಹಿಂದೆ ಇದೇ ರೀತಿಯ ಕರೆಗಳನ್ನು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.