ಅಹಮದಾಬಾದ್: '2001ರಲ್ಲಿನ ಭೂಕಂಪ, ಆರ್ಥಿಕ ಸಂಕಷ್ಟ, 2002ರ ಭುಗಿಲೆದ್ದ ಹಿಂಸಾಚಾರದಿಂದಾಗಿ ಗುಜರಾತ್ ತತ್ತರಿಸಿ ಹೋಗಿತ್ತು. ಯುವಕರು, ಉದ್ಯಮಿಗಳು ರಾಜ್ಯ ತೊರೆಯುವ ಕಾರಣ ಗುಜರಾತ್ ನಾಶವಾಗುವುದು, ದೇಶಕ್ಕೇ ಹೊರೆಯಾಗುವುದು ಎಂದು 'ನಿರ್ದಿಷ್ಟ ಕಾರ್ಯಸೂಚಿ' ಹೊಂದಿದ್ದ ಕೆಲವರು ಹೇಳಿದ್ದರು' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
'2003ರಲ್ಲಿ ನಾನು ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್ (ವಿಜಿಜಿಎಸ್) ಆರಂಭಿಸಿದೆ. ಹೂಡಿಕೆದಾರರ ಸಮಾವೇಶ ನಡೆಸಿ, ಅವರು ರಾಜ್ಯದಲ್ಲಿ ಬಂಡವಾಳ ಹೂಡುವಂತೆ ವಾಗ್ದಾನ ಪಡೆಯುವಲ್ಲಿ ಯಶಸ್ವಿಯಾದೆ' ಎಂದೂ ಮೋದಿ ಹೇಳಿದ್ದಾರೆ.
'ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್'ನ 20ನೇ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದಿನಗಳಲ್ಲಿ ಎದುರಿಸಿದ ಸಮಸ್ಯೆಗಳು, ಅವುಗಳನ್ನು ಮೆಟ್ಟಿನಿಂತ ಬಗೆಯನ್ನು ವಿವರಿಸಿದ್ದಾರೆ.
'ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡಿದ್ದೆ. ಸರ್ಕಾರ ಮುನ್ನಡೆಸುವ ಅನುಭವವೂ ಇರಲಿಲ್ಲ. ಆದರೆ, ನನ್ನ ಮುಂದೆ ಅಗಾಧ ಸವಾಲುಗಳಿದ್ದವು' ಎಂದಿದ್ದಾರೆ.
'ಗೋಧ್ರಾದಲ್ಲಿ ಹೃದಯವಿದ್ರಾವಕ ಘಟನೆ ನಡೆದ ನಂತರ ಗುಜರಾತ್ ಹಿಂಸಾಚಾರದಿಂದ ನಲುಗಿತು. ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇಲ್ಲದಿದ್ದರೂ, ರಾಜ್ಯದ ಜನತೆ ಮೇಲೆ ನನಗೆ ಅಪಾರ ನಂಬಿಕೆ ಇತ್ತು. ಆದರೆ, ನಿರ್ದಿಷ್ಟ ಕಾರ್ಯಸೂಚಿಯ ಜನರು ಮಾತ್ರ ತಮ್ಮ ಮೂಗಿನ ನೇರಕ್ಕೆ ರಾಜ್ಯದಲ್ಲಿನ ಘಟನಾವಳಿಗಳನ್ನು ವಿಶ್ಲೇಷಿಸುತ್ತಿದ್ದರು' ಎಂದು ಮೆಲುಕು ಹಾಕಿದ್ದಾರೆ.
'ಆಗಿನ ಕೇಂದ್ರ ಸರ್ಕಾರ ಗುಜರಾತ್‌ಗೆ ನೆರವು ನೀಡುತ್ತಿರಲಿಲ್ಲ. ಗುಜರಾತ್‌ನಲ್ಲಿ ಹೂಡಿಕೆ ಮಾಡದಂತೆ ಉದ್ಯಮಿಗಳನ್ನು ಹೆದರಿಸುತ್ತಿದ್ದರು. ಆದರೆ, ಉತ್ತಮ ಆಡಳಿತ, ಪಾರದರ್ಶಕತೆ, ಅಭಿವೃದ್ಧಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ ಪರಿಣಾಮ ರಾಜ್ಯದತ್ತ ಹೂಡಿಕೆದಾರರು ಮುಖಮಾಡಿದರು' ಎಂದು ಮೋದಿ ಹೇಳಿದ್ದಾರೆ.