ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯನ್ನು ನಿಲ್ಲಿಸಬೇಕೆಂದು ಕೋರಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ನ್ಯಾಯಾಲಯವು ವಜಾಗೊಳಿಸಿದೆ.

ಸಮೀಕ್ಷೆಗೆ ಈಗಾಗಲೇ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಒಪ್ಪಿಗೆ ಸಿಕ್ಕಿರುವ ಕಾರಣ ಈ ಕುರಿತು ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು ತಿಳಿಸಿರುವುದಾಗಿ ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ಅವರು ತಿಳಿಸಿದ್ದಾರೆ.
ನಿಗದಿತ ನಿಯಮಗಳಿಗೆ ವಿರುದ್ಧವಾಗಿ ಎಎಸ್‌ಐ ಸಮೀಕ್ಷೆ ನಡೆಸುತ್ತಿದೆ ಎಂದು ಆರೋಪಿಸಿರುವ ಮಸೀದಿ ಸಮಿತಿಯು, ಈ ಕುರಿತು ದಾವೆದಾರರಿಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ಶುಲ್ಕ ಪಡೆದಿಲ್ಲ ಎಂದು ವಾದಿಸಿರುವುದಾಗಿ ಮಿಶ್ರಾ ಅವರು ಹೇಳಿದ್ದಾರೆ.
'ಎಎಸ್‌ಐ ಖಾಸಗಿ ಸಂಸ್ಥೆಯಲ್ಲ. ಅದು ಸರ್ಕಾರದ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ಸಮೀಕ್ಷೆಗೆ ಹಣ ಪಾವತಿಸುವಂತೆ ಯಾರಿಗೂ ಒತ್ತಡ ಹಾಕಲು ಸಾಧ್ಯವಿಲ್ಲ' ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮಸೀದಿ ಆವರಣದಲ್ಲಿರುವ 'ವಜುಖಾನ'ದ ಸಮೀಕ್ಷೆ ನಡೆಸಬೇಕೆಂದು ಕೋರಿ ಹಿಂದೂಗಳ ಪರ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 5ರಂದು ನಡೆಸುವುದಾಗಿ ಹೇಳಿದ್ದಾರೆ.
ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದ ಬಳಿಕ ಎಎಸ್‌ಐ ಸಮೀಕ್ಷೆ ಆರಂಭಿಸಿತ್ತು.
ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ 17 ಶತಮಾನದ ಈ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ.