ಕಾಸರಗೋಡು: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಮೃತಪಟ್ಟ ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ಲೋಪವುಂಟಾಗಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ತನ್ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರಿಗೆ ವರದಿಯನ್ನು ಸಲ್ಲಿಸಲಾಗಿದೆ.
ಕಾರುಪಲ್ಟಿಯಾಗಿ ಮೃತಪಟ್ಟಿರುವ ವಿದ್ಯಾರ್ಥಿ ಫರ್ಹಾಸ್ ಕುಟುಂಬದವರು ನೀಡಿದ್ದ ದಊರಿನನ್ವಯ ಕ್ರೈಂ ಬ್ರಾಂಚ್ ತನಿಖೆ ಕೈಗೆತ್ತಿಕೊಂಡಿತ್ತು. ಕಾರಿನಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳೂ ವ್ಯತಿರಿಕ್ತ ಹೇಳಿಕೆ ನೀಡಿದ್ದರೆ ಅಲ್ಲದೆ ಅಪಘಾತಕ್ಕೀಡಾದ ಕಾರಿಗೆ ಪೂರ್ಣ ರೀತಿಯ ಫಿಟ್‍ನೆಸ್ ಇಲ್ಲದಿರುವುದು ಹಾಗೂ ಪೊಲೀಸರಿಂದ ಯಾವುದೇ ಅತಿರೇಕದ ಕ್ರಮ ನಡೆದಿಲ್ಲ ಎಂಬುದನ್ನೂ ಕ್ರೈಂ ಬ್ರಾಂಚ್ ಪತ್ತೆಹಚ್ಚಿದೆ.
ಘಟನೆಯಲ್ಲಿ ಆರೋಪಕ್ಕೊಳಗಾಗಿರುವ ಎಸ್.ಐ ಸೇರಿದಂತೆ ಮೂವರು ಪೊಲೀಸರನ್ನು ಈಗಾಗಲೇ ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮುಂದುವರಿದಿರುವುದಾಗಿ ಕ್ರೈಂ ಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.