ಜೈಪುರ: ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿದ್ದ ರಾಜಸ್ಥಾನ ಸಿಎಂ ಗೆ ರಾಜಸ್ಥಾನ ಹೈಕೋರ್ಟ್ ನ ವಿಭಾಗೀಯ ಪೀಠವೊಂದು ನೊಟೀಸ್ ಜಾರಿಗೊಳಿಸಿದೆ.
ಸಿಎಂ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದ್ದ ಪಿಐಎಲ್ ಆಧಾರದಲ್ಲಿ ಕೋರ್ಟ್ ನೊಟೀಸ್ ಜಾರಿಗೊಳಿಸಿದೆ.
ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ಸೂಚಿಸುವ ಮುಖ್ಯಮಂತ್ರಿಯವರ ಹೇಳಿಕೆಯ ನಂತರ ಸ್ಥಳೀಯ ವಕೀಲ ಶಿವಚರಣ್ ಗುಪ್ತಾ ಅವರು ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ ಎಂ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅಶುತೋಷ್ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ಶನಿವಾರ ಈ ಪ್ರಕರಣವನ್ನು ಆಲಿಸಿ ಗೆಹ್ಲೋಟ್‌ಗೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಬುಧವಾರ ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, "ಇಂದು ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಕೆಲವು ವಕೀಲರು ಸ್ವತಃ ಲಿಖಿತವಾಗಿ ತೀರ್ಪು ತೆಗೆದುಕೊಳ್ಳುತ್ತಾರೆ ಮತ್ತು ಅದೇ ತೀರ್ಪು ಪ್ರಕಟಿಸುತ್ತಾರೆ ಎಂದು ನಾನು ಕೇಳಿದ್ದೇನೆ" ಎಂದು ಹೇಳಿದರು.
ಆದರೆ, ಟೀಕೆಗಳನ್ನು ಎದುರಿಸಿದ ನಂತರ, ಮುಖ್ಯಮಂತ್ರಿಗಳು ಅವರು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವಲ್ಲ ಮತ್ತು ಯಾವಾಗಲೂ ನ್ಯಾಯಾಂಗವನ್ನು ಗೌರವಿಸುವುದಾಗಿ, ನಂಬುವುದಾಗಿ ಹೇಳಿದ್ದಾರೆ.