ಗುವಾಹಟಿ: ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಮಣಿಪುರದ ಇಂಫಾಲ್ ಕಣಿವೆಯಲ್ಲಿ 'ಮೀರಾ ಪೈಬಿ' ನೇತೃತ್ವದಡಿ ಮೈತೇಯಿ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಗುವಾಹಟಿ: ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಮಣಿಪುರದ ಇಂಫಾಲ್ ಕಣಿವೆಯಲ್ಲಿ 'ಮೀರಾ ಪೈಬಿ' ನೇತೃತ್ವದಡಿ ಮೈತೇಯಿ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಯಾವುದೇ ಷರತ್ತು ವಿಧಿಸದೆ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ ಮಹಿಳೆಯರು, ಹಲವೆಡೆ ರಸ್ತೆ ಸಂಚಾರವನ್ನು ಬಂದ್ ಮಾಡಿದರು.
ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಪೊಲೀಸ್ ಬಿಗಿಭದ್ರತೆಯನ್ನು ಹೆಚ್ಚಿಸಲಾಗಿದ್ದು, ಮುಂಜಾಗ್ರತೆಯಾಗಿ ಈ ಎರಡೂ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ.
ಸೆಪ್ಟೆಂಬರ್ 16ರಂದು ಪೊಲೀಸರ ಸೋಗಿನಲ್ಲಿ ಈ ಯುವಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಕಾನೂನುಬಾಹಿರ (ಚಟುವಟಿಕೆಗಳ ತಡೆಗಟ್ಟುವಿಕೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಹಿಂಸಾಚಾರದಿಂದ ಮಣಿಪುರದಲ್ಲಿ ಇಲ್ಲಿಯವರೆಗೆ 175 ಜನರು ಮೃತಪಟ್ಟಿದ್ದು, 60 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.