ಪಾಲಕ್ಕಾಡ್: ಐಎಸ್ ಪ್ರಕರಣದ ಶಂಕಿತರು ಕೇರಳದ ಹಲವೆಡೆ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತ್ರಿಶೂರ್ ಮತ್ತು ಪಾಲಕ್ಕಾಡ್ ಗಳಲ್ಲಿ ಎನ್.ಐ.ಎ. ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
ಈ ಹಿಂದೆ ಬಂಧಿತನಾಗಿರುವ ಆರೋಪಿ ನಬೀಲ್ ಬಳಿ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಹೇಳಿಕೆ ಪ್ರಕಾರ, ತ್ರಿಶೂರ್‍ನ ಕೇಂದ್ರದಲ್ಲಿಯೂ ಸಾಕ್ಷ್ಯ ಸಂಗ್ರಹ ನಡೆಸಲಾಗಿದ್ದು, ಉಗ್ರರ ದಾಳಿಗೆ ಸಂಚು ರೂಪಿಸಿ ರಹಸ್ಯ ಸಭೆ ನಡೆಸಿರುವುದು ಬಹಿರಂಗಗೊಂಡಿದೆ.
ಕೇರಳೀಯ ಐಎಸ್ ಭಯೋತ್ಪಾದಕರು ರಹಸ್ಯ ಕೇಂದ್ರಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದು, ಕೇರಳದಲ್ಲಿ ವ್ಯಾಪಕ ಸ್ಫೋಟಗಳಿಗೆ ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಎಎನ್‍ಐ ಈ ಕ್ರಮ ಕೈಗೊಂಡಿದೆ. ಬಂಧಿತ ಕೆಲವು ಭಯೋತ್ಪಾದಕರು ಈ ಹಿಂದೆ ಐಇಡಿ ಬಾಂಬ್‍ಗಳ ಪರೀಕ್ಷಾ ನಿಯೋಜನೆಯನ್ನು ನಡೆಸಿರುವುದಾಗಿ ಹೇಳಿಕೆ ನೀಡಿದ್ದರು. ಬಂಧಿತ ನಬೀಲ್ ಅಹ್ಮದ್, ಆಶಿಫ್ ಮತ್ತು ಶಿಯಾಸ್ ಸಿದ್ದಿಕ್ ನೇತೃತ್ವದಲ್ಲಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು. ದಾಳಿಗಾಗಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಎನ್‍ಐಎಗೆ ಲಭಿಸಿದೆ. ಇದರ ಆಧಾರದ ಮೇಲೆ ತ್ರಿಶೂರ್ ಮತ್ತು ಪಾಲಕ್ಕಾಡ್ ನಲ್ಲಿ ವ್ಯಾಪಕ ತಪಾಸಣೆ ನಡೆಸಲಾಗಿದೆ.
ಬಂಧಿತ ನಬೀಲ್ ಅಮೆರಿಕದ ಸೇನೆಯ ವೈಮಾನಿಕ ದಾಳಿಯಲ್ಲಿ ಹತನಾದ ಕೇರಳೀಯ ಐಎಸ್ ಭಯೋತ್ಪಾದಕನ ಉತ್ತರಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದುದನ್ನು ಎನ್ ಐಎ ಪತ್ತೆ ಹಚ್ಚಿತ್ತು. ಸೈಯದ್ ನಬೀಲ್ ಅಹ್ಮದ್ ಅಲಿಯಾಸ್ ನಬೀಲ್ ಅಲಿಯಾಸ್ ನಬೀಲ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕೊಲ್ಲಲ್ಪಟ್ಟ ಅಬ್ದುಲ್ ರಶೀದ್ ಅಬ್ದುಲ್ಲಾ ಉತ್ತರಾಧಿಕಾರಿಯಾಗಿ ಇಸ್ಲಾಮಿಕ್ ಸ್ಟೇಟ್ ಮಾಡ್ಯೂಲ್‍ನ ಕೇರಳ ಅಮೀರ್ ಆಗಿದ್ದಾನೆ ಎಂದು ಎನ್‍ಐಎ ಪತ್ತೆ ಮಾಡಿದೆ. ಭಯೋತ್ಪಾದಕರ ಸಂವಹನವನ್ನು ವರ್ಚುವಲ್ ಖಾಸಗಿ ನೆಟ್‍ವರ್ಕ್ ಮೂಲಕ ನಡೆಸಲಾಗಿದೆ ಎಂದು ತನಿಖಾ ತಂಡವು ಪತ್ತೆ ಮಾಡಿದೆ.