ನವದೆಹಲಿ: ಒಬ್ಬ ಅಪರಾಧಿ ಮೂಲಭೂತ ಹಕ್ಕಿನ ಭಾಗವಾಗಿ ಅವಧಿಪೂರ್ವ ಬಿಡುಗಡೆಗೆ ಮನವಿ ಸಲ್ಲಿಸಬಹುದೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ದೋಷಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠ ಹೀಗೆ ಪ್ರಶ್ನಿಸಿತು.
ಸಂವಿಧಾನದ 32ನೇ ವಿಧಿಯಡಿ ಅಪರಾಧಿಗಳು ಅವಧಿಪೂರ್ವ ಬಿಡುಗಡೆಗೆ ಅರ್ಜಿ ಸಲ್ಲಿಸಬಹುದೇ ಎಂದು ಕೇಳಿತು.
ಪ್ರಕರಣದ ಅಪರಾಧಿ ಪರ ಹಾಜರಿದ್ದ ವಕೀಲರೊಬ್ಬರು, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವರ್ಷಕ್ಕೂ ಹೆಚ್ಚು ಕಾಲ ತಮ್ಮ ಕಕ್ಷಿದಾರರು ಸ್ವತಂತ್ರವಾಗಿದ್ದಾರೆ. ನ್ಯಾಯಾಲಯ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಮನವಿ ಮಾಡಿದರು.
'ಅವಧಿಪೂರ್ವ ಬಿಡುಗಡೆಗೆ ಅವಕಾಶ ನೀಡಿದ್ದನ್ನು ಅಥವಾ ನಿರಾಕರಿಸಿದ್ದನ್ನು ಪ್ರಶ್ನಿಸಿ 226ನೇ ವಿಧಿಯಡಿಯಲ್ಲಿ ಹೈಕೋರ್ಟ್‌ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ' ಎಂದು ವಾದಿಸಿದರು.
ಆಗ ನ್ಯಾಯಪೀಠ, 'ಮೂಲಭೂತ ಹಕ್ಕಿನ ಭಾಗವಾಗಿ ಅವಧಿಪೂರ್ವ ಬಿಡುಗಡೆಗೆ ಕೋರಲು ಸಾಧ್ಯವೇ' ಎಂದು ಪ್ರಶ್ನಿಸಿತು.
ದೋಷಿ ಪರ ವಕೀಲರು, ಅರ್ಜಿದಾರರ ಯಾವುದೇ ಮೂಲಭೂತ ಹಕ್ಕು ಉಲ್ಲಂಘನೆಯಾಗಿಲ್ಲ. ಹಾಗಾಗಿ ಅವರು ಅಂಥ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
'ಒಮ್ಮೆ ತಮ್ಮ ಕಕ್ಷಿದಾರರು ಕಾರಾಗೃಹದಿಂದ ಬಿಡುಗಡೆಯಾದ ನಂತರ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವಂತಿಲ್ಲ. ದೂರುದಾರರು ಮೂಲಭೂತ ಹಕ್ಕಾದ 'ಸ್ವಾತಂತ್ರ್ಯ'ವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಹೇಳಿದರು.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿಯೂ ಸಂತ್ರಸ್ತ ಮತ್ತು ದೂರುದಾರರು ಸೀಮಿತ ಪಾತ್ರ ಹೊಂದಿದ್ದಾರೆ. ಒಮ್ಮೆ ಶಿಕ್ಷೆ ಘೋಷಣೆಯಾದರೆ ಸಂತ್ರಸ್ತನ ಪಾತ್ರ ಕೊನೆಯಾಗುತ್ತದೆ ಎಂದು ವಾದ ಮಂಡಿಸಿದರು.
ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿತು.
11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಅರ್ಜಿಯೂ ಸೇರಿದಂತೆ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.