ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿನ ಸೇವಾ ದರವನ್ನು ಆಸ್ಪತ್ರೆ ಮ್ಯಾನೇಜ್‍ಮೆಂಟ್ ಸಮಿತಿ ಏಕಾಏಕಿ ಹೆಚ್ಚಿಸಿದ್ದು, ಇದು ಬಡ ರೋಗಿಗಳಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. ಬಡ ರೋಗಿಗಳ ಪಾಲಿಗೆ ಧನ್ವಂತರಿಯಂತಾಗಬೇಕಾಗಿದ್ದ ಸರ್ಕಾರಿ ಆಸ್ಪತ್ರೆಗಳಿಂದ ಈ ರೀತಿಯಲ್ಲಿ ಹಣ ವಸೂಲಿಮಾಡುತ್ತಿರುವುದರ ವಿರುದ್ಧ ವಿವಿಧೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ.
ಈ ಹಿಂದೆ ಓಪಿ ಟಿಕೆಟ್ ಸೌಲಭ್ಯವೂ ಉಚಿತವಾಗಿದ್ದರೆ, ನಂತರ ಐದು ರೂ. ವರೆಗೆ ಎರಿಕೆ ಮಾಡಲಾಗಿತ್ತು. ಪ್ರಸಕ್ತ ಓಪಿ ಟಿಕೆಟ್ ದರವನ್ನು ಹತ್ತು ರೂ.ಗೆ ಏರಿಸಲಾಗಿದೆ. ಒಳರೋಗಿ ವಿಭಾಗದ ರೋಗಿಗಳಿಗೆ ದಾಖಲಾತಿ ದರವನ್ನು 10ರಿಂದ 20ರೂ.ಗೆ ಏರಿಸಲಾಗಿದೆ. ಫಿಸಿಯೋಥೆರಪಿ ಚಿಕಿತ್ಸೆಗೆ ಈ ಹಿಂದೆ ವಾರಕ್ಕೆ ನಿಗದಿಪಡಿಸಲಾಗಿದ್ದ 30ರೂ. ಮೊತ್ತವನ್ನು ಪ್ರಸಕ್ತ ಪ್ರತಿ ದಿನಕ್ಕೆ 25ರೂ.ಗೆ ಹೆಚ್ಚಿಸಲಾಗಿದೆ. ಉಚಿತವಾಗಿ ಲಭಿಸುತ್ತಿದ್ದ ಇಎನ್‍ಟಿ, ಲೇಸರ್ ಥೆರಪಿ ಚಿಕಿತ್ಸೆಗೂ ದರ ನಿಗದಿಪಡಿಸಲಾಗಿದೆ. ಇಎನ್‍ಟಿಗೆ 20ರೂ ಹಾಗೂ ಲೇಸರ್ ಥೆರಪಿಗೆ 200ರೂ. ನಿಗದಿಪಡಿಒಸಲಾಗಿದೆ. ಮೇಜರ್ ಶಸ್ತ್ರ ಚಿಕಿತ್ಸೆಗೆ ಈ ಹಿಂದೆ ಇದ್ದ ನೂರು ರೂ.ನಿಂದ 150ಕ್ಕೇರಿಸಲಾಗಿದೆ. ಗಾಯಗಳಿಗೆ ಉಚಿತವಾಘಿದ್ದ ಡ್ರೆಸ್ಸಿಂಗ್ ಸೌಲಭ್ಯಕ್ಕೆ ಇನ್ನು ಮುಂದೆ 20ರೂ. ನೀಡಬೇಕು.
ಜನರಲ್ ಆಸ್ಪತ್ರೆ ನಿರ್ವಹಣೆ ಕಾಸರಗೋಡು ನಗರಸಭೆಗೆ ಸೇರಿದ್ದು, ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ಹಾಸ್ಪಿಟಲ್ ಮ್ಯಾನೇಜ್‍ಮೆಂಟ್ ಕಮಿಟಿ(ಎಚ್‍ಎಂಸಿ)ಗೆ ಸೇವಾ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಬಡಜನತೆ ಹೆಚ್ಚಾಗಿ ಆಶ್ರಯಿಸುತ್ತಿರುವ ಸರ್ಕಾರಿ ಆಸ್ಪತ್ರೆಯ ಸೇವಾ ದರ ಹೆಚ್ಚಿಸಿರುವುದು ಬಹುತೇಕ ರೋಗಿಗಳಿಗೆ ಸಮಸ್ಯೆ ತಂದೊಡ್ಡಿದೆ. ಸರ್ಕಾರ ಹಾಗೂ ನಗರಸಭೆ ಬಡರೋಗಿಗಳ ಬಗ್ಗೆ ವಹಿಸುತ್ತಿರುವ ಕಾಳಜಿ, ಸೇವಾದರ ಹೆಚ್ಚಳದಿಂದ ಸಾಬೀತಾಗಿದೆ ಎಂದು ಆಸ್ಪತ್ರೆಯನ್ನು ಆಶ್ರಯಿಸುತ್ತಿರುವ ರೋಗಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಸೇವಾದರ ಏರಿಕೆಯನ್ನು ಕಾಸರಗೋಡು ನಗರಸಭಾ ಆಡಳಿತವೂ ಪರೋಕ್ಷವಾಗಿ ಬೆಂಬಲಿಸುತ್ತಿದ್ದು, ದರ ಹೆಚ್ಚಳ ಅನಿವಾರ್ಯ ಎಂಬುದಾಗಿ ತಿಳಿಸಿದೆ.