ಲಖನೌ: ದೇಶದಲ್ಲಿ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುವಂಥ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ತನ್ನ ಗ್ರಾಮದ ಸ್ಮಶಾನಕ್ಕೆ ಸೇರಿದ್ದ ಭೂಮಿಯ ಕಬಳಿಕೆ ಕುರಿತು ದೂರು ನೀಡಲು ಹೋಗಿದ್ದ ಯುವಕನಿಗೆ ಜಿಲ್ಲಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರು ಕೋಳಿಯಂತೆ ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳವಂತೆ ಶಿಕ್ಷೆ ನೀಡಿದ ಘಟನೆ ನಡೆದಿದೆ.
ಕೋಳಿಯಂತೆ ಕುಳಿತುಕೊಳ್ಳುವಂತೆ ಅಧಿಕಾರಿಯು ಯುವಕನಿಗೆ ಹೇಳಿದ್ದು ಪ್ರಾಥಮಿಕ ತನಿಖೆಗಳಿಂದ ಸಾಬೀತಾಗಿದೆ. ಹಾಗಾಗಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಂದನ್‌ಪುರ ಗ್ರಾಮದಲ್ಲಿಯ ಸ್ಮಶಾನದ ಭೂಮಿಯನ್ನು ಕೆಲವರು ಕಬಳಿಸಿದ್ದಾರೆ. ಆ ಸ್ಥಳವನ್ನು ಅವರಿಂದ ಮುಕ್ತಗೊಳಿಸಿ ಎಂದು ಎಸ್‌ಡಿಎಂಗೆ ಮನವಿ ಮಾಡಲು ಗ್ರಾಮದ ಇತರರ ಜೊತೆ ಸಂತ್ರಸ್ತ ಯುವಕನು ಎಸ್‌ಡಿಎಂ ಕಚೇರಿಗೆ ತೆರಳಿದ್ದ ಎಂದು ಮೂಲಗಳು ತಿಳಿಸಿವೆ.
'ಮನವಿ ಸಲ್ಲಿಸುವ ವೇಳೆ ಕುಪಿತರಾದ ಅಧಿಕಾರಿಯು ಕೋಳಿಯಂತೆ ಕುಕ್ಕುರುಗಾಲಿನಲ್ಲಿ ಕೂರುವಂತೆ ತಾಕೀತು ಮಾಡಿದರು. ನಮ್ಮ ತಂಡದಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಈ ವೇಳೆ ವಿಡಿಯೊ ಚಿತ್ರೀಕರಿಸಿದ್ದಾರೆ' ಎಂದು ಯುವಕ ಹೇಳಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕನನ್ನು ಕೂರಿಸಿ ಅಧಿಕಾರಿಯು ನಗುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. 'ಯುವಕ ಕಚೇರಿಯೊಳಗೆ ಬಂದಾಗಲೇ ಕೋಳಿಯಂತೆ ಬಾಗಿ ಕುಳಿತಿದ್ದ, ನಾನೇ ಅವನಿಗೆ ಎದ್ದು ನಿಲ್ಲುವಂತೆ ಹೇಳಿದೆ. ನನ್ನ ವಿರುದ್ಧ ಸಂಚು ರೂಪಿಸಲು ವಿಡಿಯೊ ಹರಿಬಿಡಲಾಗಿದೆ' ಎಂದು ಅಧಿಕಾರಿ ಹೇಳಿದ್ದಾರೆ.