ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಕುರಿತು ಲೋಕಸಭೆಯಲ್ಲಿ ಚರ್ಚಿಸಲು ಸಿದ್ಧವಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಚಂದ್ರಯಾನ-3 ಯಶಸ್ಸು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಇತರ ಸಾಧನೆಗಳ ಕುರಿತು ಚರ್ಚೆ ಆರಂಭಿಸಿದ ಸಿಂಗ್, ದೇಶದ ಗಡಿ ಭದ್ರತೆ ಮತ್ತು ರಾಷ್ಟ್ರದ ಗಡಿಯನ್ನು ರಕ್ಷಿಸುವಲ್ಲಿ ವಿಜ್ಞಾನದ ಪಾತ್ರವನ್ನು ಉಲ್ಲೇಖಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಚೀನಾದೊಂದಿಗಿನ ಗಡಿ ಬಿಕ್ಕಟ್ಟನ್ನು ಉಲ್ಲೇಖಿಸಿ, ಚರ್ಚೆ ನಡೆಸಲು ಧೈರ್ಯವಿದೆಯೇ? ಎಂದು ಸವಾಲು ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, 'ಪೂರಿ ಹಿಮ್ಮತ್ ಹೇ (ನನಗೆ ಸಂಪೂರ್ಣ ಧೈರ್ಯವಿದೆ). ನಾನು ಚರ್ಚೆಗೆ ಸಿದ್ಧ. ಚರ್ಚಿಸುವ ವಿಶ್ವಾಸವೂ ಇದೆ' ಎಂದು ಹೇಳಿದರು.
2020ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಮಾರಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿವೆ.
ಹಲವು ಸುತ್ತಿನ ರಾಜತಾಂತ್ರಿಕ ಮತ್ತು ಸೇನೆಯ ಮುಖ್ಯಸ್ಥರ ನಡುವಿನ ಮಾತುಕತೆ ನಂತರ ಭಾರತ ಮತ್ತು ಚೀನಾ ಹಲವು ಪ್ರದೇಶಗಳಿಂದ ಸೇನೆಯನ್ನು ಹಿಂತೆಗೆದುಕೊಂಡಿವೆ. ಆದಾಗ್ಯೂ ಪೂರ್ವ ಲಡಾಖ್‌ನಲ್ಲಿ ಕೆಲವು ನಿರ್ದಿಷ್ಟ ಕೇಂದ್ರಗಳಲ್ಲಿ ಕಳೆದ ಮೂರು ವರ್ಷಗಳಿಂದ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಉಭಯತ್ರರ ನಡುವಿನ ಸಂಬಂಧ ಸಹಜ ಸ್ಥಿತಿಗೆ ಮರಳಲು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಶಾಂತಿ ನೆಲೆಸುವುದು ಪ್ರಮುಖವಾಗಿದೆ ಎಂದು ಭಾರತವು ನಿರಂತರವಾಗಿ ಪ್ರತಿಪಾದಿಸುತ್ತಲೇ ಇದೆ.