ನವದೆಹಲಿ (PTI): ಶಿಕ್ಷಕರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನು ಇನ್ನು ಮುಂದೆ 'ಮದನ್ ಮೋಹನ್ ಮಾಳವೀಯ ಶಿಕ್ಷಕರ ತರಬೇತಿ ಕೇಂದ್ರ' ಎಂದು ಕರೆಯಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮಂಗಳವಾರ ಇಲ್ಲಿ ನಡೆದ 'ಮಾಳವೀಯ ಮಿಷನ್- ಶಿಕ್ಷಕರ ತರಬೇತಿ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದ ಪ್ರಧಾನ್ ಅವರು ಈ ವಿಷಯ ತಿಳಿಸಿದ್ದಾರೆ.
ಶಿಕ್ಷಕರು ಮತ್ತು ತರಬೇತಿಗಾಗಿ ಕೇಂದ್ರ ವಲಯದ 'ಪಂಡಿತ್ ಮದನ್ ಮೋಹನ್ ಮಾಳವೀಯ ರಾಷ್ಟ್ರೀಯ ಮಿಷನ್' (ಪಿಎಂಎಂಎಂಎನ್‌ಎಂಟಿಟಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಉದ್ಘಾಟಿಸಿದ್ದರು.
'ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶವನ್ನು ಪೂರೈಸಲು ಕೇಂದ್ರ ಶಿಕ್ಷಣ ಸಚಿವಾಲಯವು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು ಮತ್ತು ಪಿಎಂಎಂಎಂಎನ್‌ಎಂಟಿಟಿ ಕೇಂದ್ರಗಳ ನಡುವಿನ ಏಕೀಕರಣವನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಮೂಲಸೌಕರ್ಯ, ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಮಾಳವೀಯ ಮಿಷನ್ ಎಂದು ನಾಮಕರಣ ಮಾಡಲಾಗಿದೆ. ಈ ಮಿಷನ್ ಅಡಿಯಲ್ಲಿ 110 ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮಾಳವೀಯ ಮಿಷನ್ ಕೇಂದ್ರಗಳು ಎಂದು ಕರೆಯಲಾಗುವುದು' ಎಂದು ಪ್ರಧಾನ್ ತಿಳಿಸಿದ್ದಾರೆ.