ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಮೆಕ್ಸಿಕೊ, ಹರ್ಜೆಗೋವಿನಾ, ಬೋಸ್ನಿಯಾ, ಅರ್ಮೇನಿಯಾದ ಸಚಿವರೊಂದಿಗೆ ಪ್ರತ್ಯೇಕವಾಗಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.
'ಮೆಕ್ಸಿಕೊದ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದು ಸಂತಸದ ವಿಷಯ. ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಆರ್ಥಿಕತೆ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಮೇಲೆ ಗಮನ ಕೇಂದ್ರೀಕರಿಸಿ ನಮ್ಮ ಶ್ರೇಷ್ಠ ಪಾಲುದಾರಿಕೆಯನ್ನು ಮುಂದುವರಿಸಿವ ಬಗ್ಗೆ ಚರ್ಚೆ ನಡೆಸಲಾಯಿತು. ಜತೆಗೆ, ಜಿ 20ಯಲ್ಲಿ ಒಟ್ಟಾಗಿ ಕೆಲಸ ಮಾಡುವ ಅಭಿಪ್ರಾಯಗಳನ್ನು ಹಂಚಿಕೊಂಡೆವು' ಎಂದು ಜೈಶಂಕರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಹರ್ಜೆಗೋವಿನಾ, ಅರ್ಮೇನಿಯಾ ಮತ್ತು ಬೋಸ್ನಿಯಾದ ವಿದೇಶಾಂಗ ಸಚಿವರ ಜತೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಆರ್ಥಿಕತೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಚರ್ಚೆ ನಡೆಯಿತು' ಎಂದಿದ್ದಾರೆ.