ವಿನ್ನಿಪೆಗ್: ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ ಸುಖ್‌ದೂಲ್ ಸಿಂಗ್ ಅಲಿಯಾಸ್ ಸುಖಾ ದುನೇಕೆನನ್ನು ಬುಧವಾರ ರಾತ್ರಿ ಕೆನಡಾದ ವಿನ್ನಿಪೆಗ್ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿಂತೆ ಭಾರತದ ಸಂಭಾವ್ಯ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ್ದು, ಈ ವಿಚಾರವಾಗಿ ಉಭಯ ದೇಶಗಳ ಸಂಬಂಧದಲ್ಲಿ ಬಿರುಕುಂಟಾಗಿದೆ.
ಈ ಬೆಳವಣಿಗೆಯ ನಡುವೆಯೆ ಹತ್ಯೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎರಡು ಗ್ಯಾಂಗ್‌ಗಳ ನಡುವಿನ ವೈಷಮ್ಯ ದುನೇಕೆ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಸುಖಾ ದುನೇಕೆ ವಿರುದ್ಧ ಕೊಲೆ, ಬೆದರಿಕೆ, ದರೋಡೆ ಸೇರಿದಂತೆ ಸುಮಾರು 18 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್‌ನ ಮೋಗಾ ಜಿಲ್ಲೆಯ ಕಲಾನ್ ಗ್ರಾಮದಲ್ಲಿ ಜನಿಸಿದ್ದ ಸುಖ ದುನೇಕೆ, 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ್ದನು. ದೇವಿಂದರ್ ಬಾಂಬಿಹಾ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ದುನೇಕೆ, ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ಗಳಾದ ಅರ್ಶ್ ದಲ್ಲಾ, ಲಕ್ಕಿ ಪಟಿಯಾಲಾ, ಮಲೇಷ್ಯಾ ಮೂಲದ ಗ್ಯಾಂಗ್‌ಸ್ಟರ್ ಜಕ್‌ಪಾಲ್ ಸಿಂಗ್ ಅಲಿಯಾಸ್ ಲಾಲಿ ಸೇರಿದಂತೆ ಹಲವರೊಂದಿಗೆ ನಿಕಟ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಕೆನಡಾದಲ್ಲಿದ್ದುಕೊಂಡೇ ಸುಖ ದುನೇಕೆ ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹತ್ಯೆ, ಸುಲಿಗೆಯಂತಹ ಕೃತ್ಯಗಳಲ್ಲಿ ತೊಡಗಿದ್ದನು ಎಂದು ಹೇಳಲಾಗಿದೆ. ತನ್ನ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಸದಸ್ಯರ ಹತ್ಯೆಗಳಲ್ಲಿಯೂ ಈತನ ಕೈವಾಡವಿತ್ತು ಎನ್ನಲಾಗಿದೆ.