ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಜಿಲ್ಲೆಯ ಮೊದಲ ಸ್ಮಾರ್ಟ್ ಅಂಗನವಾಡಿಯನ್ನು ಬೇಡಡ್ಕ ಗ್ರಾಮ ಪಂಚಾಯಿತಿಯ ಬಳನಡುಕ್ಕಾಟ್‍ನಲ್ಲಿ ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು.
ನೂತನ ಕಟ್ಟಡವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಹಾಗೂ ಬೇಡಡ್ಕ ಪಂಚಾಯತ್ ಜಂಟಿಯಾಗಿ 42.9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಮಕ್ಕಳ ಸ್ನೇಹಿ ಕುರ್ಚಿ, ಅಧ್ಯಯನ ಕೊಠಡಿ, ವಿಶ್ರಾಂತಿ ಕೊಠಡಿ, ಅಡುಗೆ ಕೋಣೆ, ಸ್ಟೋರ್ ರೂಂ, ಒಳಾಂಗಣ ಹೊರಾಂಗಣ ಆಟದ ಪ್ರದೇಶ, ಟಿವಿ, ಮಕ್ಕಳ ಸ್ನೇಹಿ ಪರಿಸರ ಮತ್ತು ಉದ್ಯಾನದೊಂದಿಗೆ ಮಕ್ಕಳನ್ನು ಆಕರ್ಷಿಸಲು ಸ್ಮಾರ್ಟ್ ಅಂಗನವಾಡಿ ವಿನ್ಯಾಸಗೊಳಿಸಲಾಗಿದೆ. 10 ಸೆಂಟ್ಸ್ ಜಾಗದಲ್ಲಿ ಕಟ್ಟಡ ಸಿದ್ಧಗೊಂಡಿದೆ.
ಸ್ವಂತ ಕಟ್ಟಡ ಇಲ್ಲದ ಕಾರಣ ಐದು ವರ್ಷಗಳಿಂದ ಕೀಕಕಾನಂ ಜಾನಕಿ ಅವರ ಮನೆಯಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿತ್ತು. ಸಮಾರಂಭದಲ್ಲಿ ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಜಾನಕಿಯಮ್ಮ ಹಾಗೂ ಅನಂತನ್ ಮರುತಾಳ ಅವರನ್ನು ಸನ್ಮಾನಿಸಲಾಯಿತು. ಐಸಿಡಿಎಸ್ ಸೆಲ್ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಸಿ.ಸುಧಾ, ಕುಟ್ಟಿಕೋಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ರಜನಿ, ಮಾಜಿ ಪಂಚಾಯಿತಿ ಸದಸ್ಯೆ ನಬೀಸಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಮುರಳೀಧರನ್, ಕುಂಞÂ್ಞ ಕೃಷ್ಣನ್ ಮಾಡಕ್ಕಲ್, ಜನಾರ್ದನನ್ ನಾಯರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬೇಡಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವಸಂತಕುಮಾರಿ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ ಗೋಪಿ, ಪಂಚಾಯಿತಿ ಸದಸ್ಯೆ ನೂರಜಹಾನ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ರಾಧಾಕೃಷ್ಣನ್ ಭಾಗವಹಿಸಿದ್ದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್ ಸ್ವಾಗತಿಸಿ, ಪಂಚಾಯಿತಿ ಐಸಿಡಿಎಸ್ ಮೇಲ್ವಿಚಾರಕಿ ಕೆ.ಎ.ಲಿಲಿನ್ ವಂದಿಸಿದರು.