ಕೊಚ್ಚಿ: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳದ ಎರ್ನಾಕುಲಂನ ಕದಮಕ್ಕುಡಿಯಲ್ಲಿ ನಡೆದಿದೆ.
ಮೃತರನ್ನು ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್ (7) ಮತ್ತು ಆಯರೂನ್ (5) ಎಂದು ಗುರುತಿಸಲಾಗಿದೆ.
ನಿಜೋ ಮತ್ತು ಶಿಲ್ಪಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಮಕ್ಕಳಿಬ್ಬರು ಬೆಡ್ ಮೇಲೆ ಹೆಣವಾಗಿ ಬಿದ್ದಿದ್ದರು. ಇಬ್ಬರು ಗಂಡು ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಿಜೋ ಕುಟುಂಬ ಮಹಡಿಯ ಮೇಲೆ ವಾಸವಿದ್ದರು. ಅವರ ತಾಯಿ, ಸಹೋದರ ಮತ್ತು ಕುಟುಂಬ ನೆಲಮಹಡಿಯಲ್ಲಿ ವಾಸವಿದ್ದರು. ಮಕ್ಕಳು ಕಾಣದಿದ್ದಾಗ ನಿಜೋ ಅವರ ತಾಯಿ ಬೆಳಗ್ಗೆ ಮೇಲಿನ ಮಹಡಿಗೆ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಪರವೂರ್ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.ಇಟಲಿಗೆ ಹೋದದ್ದು ಫಲಿಸಲಿಲ್ಲ
ನಿಜೋ ಒಬ್ಬ ಕಟ್ಟಡ ಕಾರ್ಮಿಕ ಮತ್ತು ಕಲಾವಿದ. ಮಕ್ಕಳು ವರಪುಳ ಇಸಾಬೆಲ್ಲಾ ಶಾಲೆಯಲ್ಲಿ ಓದುತ್ತಿದ್ದರು. ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಿಲ್ಪಾ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದರು. ಆದರೆ, ಬಯಸಿದ ಕೆಲಸ ಸಿಗದೆ ಹಿಂತಿರುಗಬೇಕಾಯಿತು. ಹೆಚ್ಚುವರಿ ಆರ್ಥಿಕ ಹೊರೆ ಕುಟುಂಬವನ್ನು ದುಡುಕಿನ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.