ಕಾಸರಗೋಡು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಸರಗೋಡು ಶಾಖೆಯಿಂದ ತಿರುವನಂತಪುರ ಶಾಖೆಗೆ ಕಳುಹಿಸಿಕೊಡಲಾದ ನೋಟಿನ ಕಂತೆಗಳಲ್ಲಿ ಕಳ್ಳನೋಟು ಪತ್ತೆಯಾಗಿದ್ದು, ಈ ಬಗ್ಗೆ ತಿರುವನಂತಪುರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಘಿ ಪ್ರಕರಣವನ್ನು ಕಾಸರಗೋಡು ನಗರಠಾಣೆಗೆ ಹಸ್ತಾಂತರಿಸಲಾಗಿದೆ. ಕಾಸರಗೋಡು ಶಾಖೆಯಿಂದ ನೋಟುಗಳ ಕಂತೆಯನ್ನು ಅತೀ ಭದ್ರತೆಯೊಂದಿಗೆ ಮೂರು ದಿವಸಗಳ ಹಿಂದೆ ತಿರುವನಂತಪುರಕ್ಕೆ ಕಳುಹಿಸಿಕೊಡಲಾಗಿದ್ದು, ಇದನ್ನು ಪರಿಶೋಧಿಸಿದಾಗ 500ರೂ. ಮುಖಬೆಲೆಯ ಐದು ಕಳ್ಳನೋಟುಗಳು ಪತ್ತೆಯಾಗಿತ್ತು. ಬ್ಯಾಂಕಿನಿಂದ ರವಾನೆಯಾಗಿರುವ ಹಣದಲ್ಲಿ ಕಳ್ಳನೋಟು ಪತ್ತೆಯಾದ ಪ್ರಕರಣವನನ್ನು ಗಂಭೀರವಾಗಿ ಪರಿಗಣಿಸಿದ ಆರ್.ಬಿ.ಐ ಅಧಿಕಾರಿಗಳು, ಈ ಬಗ್ಗೆ ತಿರುವನಂತಪುರದ ಮ್ಯೂಸಿಯಂ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಜಿಲ್ಲೆಯಲ್ಲಿ ಈ ಹಿಂದೆಯೂ ಕಳ್ಳನೋಟು ಪತ್ತೆಯಾದ ಪ್ರಕರಣದ ದಾಖಲಾಗಿದ್ದು, ಅತೀವ ಜಾಗ್ರತೆಯೊಂದಿಗೆ ಹಣಕಾಸು ಸಿಬ್ಬಂದಿ ವ್ಯವಹಾರ ನಡೆಸಿಕೊಂಡು ಬರುತ್ತಿರುವ ಮಧ್ಯೆ ಕಳ್ಳನೋಟು ಪತ್ತೆಯಾಗಿರುವುದು ಬ್ಯಾಂಕ್ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಕಳ್ಳನೋಟು ಚಲಾವಣೆ ದಂಧೆ ಸಕ್ರಿಯವಾಗಿದ್ದು, ಮಧ್ಯವರ್ತಿಗಳ ಮೂಲಕ ಕಳ್ಳನೋಟು ಚಲಾಯಿಸಲಾಗುತ್ತಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.