ಕಾಸರಗೋಡು: ಪೀಳಿಗೆಯಿಂದ ಪಾಲಿಸಲ್ಪಡುವ ನಾಡಿನ ಸಾಂಸ್ಕøತಿಕ ಮತ್ತು ಸಾಮಾಜಿಕ ಕಲೆಗಳು ಜನಪದ ಕಲೆಗಳಾಗಿವೆ. ಕೇರಳ ಜಾನಪದ ಅಕಾಡೆಮಿ ಮತ್ತು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಸಂಸ್ಥೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಆಶ್ರಯದಲ್ಲಿ ರಾಷ್ಟ್ರೀಯ ಜಾನಪದ ಫೆಸ್ಟ್ ಕಯ್ಯೂರಿನಲ್ಲಿ ಪ್ರಾರಂಭವಾಗಿದೆ. ಕಯ್ಯೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಜಾನಪದ ಉತ್ಸವವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ದೇಶದ ಬಹುತ್ವ ಮತ್ತು ಜಾತ್ಯತೀತತೆಗೆ ಧಕ್ಕೆಯುಂಟಾಗುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಜಾನಪದ ಉತ್ಸವದಂತಹ ಸಾಂಸ್ಕೃತಿಕ ಹಬ್ಬಗಳು ಮಹತ್ವ ಪಡೆಯುತ್ತವೆ ಎಂದರು.
ಕೈಯೂರು ಚಿಮೇನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಉಣ್ಣಿರಾಜ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಪಿ.ಬಿ.ಶೀಬಾ, ಮಿಲ್ಮಾ ಮಲಬಾರ್ ಪ್ರಾದೇಶಿಕ ನಿರ್ದೇಶಕ ಕೆ.ಸುಧಾಕರನ್, ಶಾಲಾ ಮುಖ್ಯ ಶಿಕ್ಷಕ ಪ್ರಮೋದ್ ಆಲಪ್ಪತಂಪನ್ ಮಾತನಾಡಿದರು. ಕೇರಳ ಜಾನಪದ ಅಕಾಡೆಮಿಯ ಕಾರ್ಯದರ್ಶಿ ಎ.ವಿ.ಅಜಯಕುಮಾರ್ ಸ್ವಾಗತಿಸಿ, ಎಂ.ಮನೋಜ್ ವಂದಿಸಿದರು.
ನಂತರ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಕಲಾವಿದರಿಂದ ಗೂಮರ್, ಫಾಗ್, ಡೋಗ್ರಿ ಮತ್ತು ಪಹಾಡಿ ನೃತ್ಯಗಳು ಮತ್ತು ಸ್ಥಳೀಯ ಕಲಾವಿದರಿಂದ ಪಾಲಿಯಾನ್ ಮತ್ತು ಮುಡಿಯೆಟ್ ನೃತ್ಯಗಳು ನಡೆದವು.