ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ತಿಕ್ಕಾಟದ ನಡುವೆ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಕೈವಾಡವಿದೆ ಎಂಬ ಆರೋಪದ ಕುರಿತಂತೆ ಕೆನಡಾ ಯಾವುದೇ ಪುರಾವೆಯನ್ನು ಹಂಚಿಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ತಿಕ್ಕಾಟದ ನಡುವೆ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಕೈವಾಡವಿದೆ ಎಂಬ ಆರೋಪದ ಕುರಿತಂತೆ ಕೆನಡಾ ಯಾವುದೇ ಪುರಾವೆಯನ್ನು ಹಂಚಿಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
'ಸಿಂಗ್ ಹತ್ಯೆ ಕುರಿತ ಯಾವುದೇ ಮಾಹಿತಿ ಹಂಚಿಕೊಂಡರೂ ಪರಿಶೀಲನೆಗೆ ಸಿದ್ಧರಿದ್ದೇವೆ. ಆದರೆ, ಈವರೆಗೆ ಕೆನಡಾದಿಂದ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ'ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
ಆದರೆ, ಕೆನಡಾದಲ್ಲಿ ಕುಳಿತು ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಪುರಾವೆಗಳನ್ನು ನಾವು ಹಂಚಿಕೊಂಡಿದ್ದೇವೆ. ಆ ಕುರಿತಂತೆ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ನಮ್ಮ ಮೇಲೆ ಆರೋಪ ಮಾಡುತ್ತಿರುವುದನ್ನು ನೋಡಿದರೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಖಾಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಅವರ ಮೇಲಿನ ಗುಂಡಿನ ದಾಳಿಯ ಹಿಂದೆ ಭಾರತೀಯ ಏಜೆಂಟರು ಇದ್ದಾರೆ ಎಂದು ಕೆನಡಾ ಪ್ರಧಾನಿ ಟ್ರುಡೊ ಸೋಮವಾರ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ.
ಈ ನಡುವೆ ಉಭಯ ರಾಷ್ಟ್ರಗಳು ಆಯಾ ದೇಶಗಳು ನೇಮಕ ಮಾಡಿದ್ದ ರಾಜತಾಂತ್ರಿಕ ಅಧಿಕಾರಿಗಳನ್ನು ಅಮಾನತು ಮಾಡಿವೆ. ಭಾರತವು ಕೆನಡಾದಲ್ಲಿನ ವೀಸಾ ಸೇವೆಯನ್ನು ಇಂದು ರದ್ದು ಮಾಡಿದೆ.
ಭಾರತಕ್ಕೆ ಭೇಟಿ ನೀಡಬಯಸುವ ಅಲ್ಲಿನ ಪ್ರಜೆಗಳ ವೀಸಾ ಅರ್ಜಿ ಆರಂಭಿಕ ಪರಿಶೀಲನೆಗೆ ನೇಮಕಗೊಂಡಿರುವ ಸಂಸ್ಥೆ ಬಿಎಲ್‌ಎಸ್ ಇಂಟರ್‌ನ್ಯಾಷನಲ್, 'ಕಾರ್ಯಾಚರಣೆಯ ಕಾರಣಗಳಿಗಾಗಿ' ವೀಸಾ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ವೆಬ್‌ಸೈಟ್‌ನ ಕೆನಡಾ ಪುಟದಲ್ಲಿ ಹಾಕಿದ್ದ ಸೂಚನೆಯನ್ನು ಸಂಸ್ಥೆ ಒಂದು ತಾಸಿನೊಳಗೇ ಹಿಂದಕ್ಕೆ ಪಡೆದು ಮತ್ತೆ ವೆಬ್‌ಸೈಟ್‌ನಲ್ಲಿ ಪ್ರಕಟಣೆ ನೀಡಿದೆ.
'ಭಾರತದಿಂದ ಪ್ರಮುಖ ಸೂಚನೆ, ಕಾರ್ಯಾಚರಣೆಯ ಕಾರಣ ಭಾರತದ ವೀಸಾ ಸೇವೆಗಳನ್ನು ಇದೇ 21ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಬಿಎಲ್‌ಎಸ್ ವೆಬ್‌ಸೈಟ್ ಗಮನಿಸಿ' ಎಂದು ಹೇಳಿದೆ.