ನವದೆಹಲಿ: 'ಭಾರತೀಯ ವಾಯುಪಡೆಯಲ್ಲಿ ಹೊಸದಾಗಿ ಆರಂಭಿಸಿರುವ ಶಸ್ತ್ರಾಸ್ತ್ರ ನಿರ್ವಹಣಾ ವಿಭಾಗಕ್ಕೆ (ವೆಪನ್ಸ್ ಸಿಸ್ಟಂ ಬ್ರಾಂಚ್) 33 ಅಧಿಕಾರಿಗಳನ್ನು ಒಳಗೊಂಡ ಮೊದಲ ಬ್ಯಾಚ್ ನೇಮಕಗೊಂಡಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ಈ ತಂಡ ಕರ್ತವ್ಯಕ್ಕೆ ಹಾಜರಾಗಲಿದೆ' ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ವಿ.ಆರ್. ಚೌಧರಿ ತಿಳಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕ್ಷಿಪಣಿ, ಡ್ರೋನ್ ಬಳಕೆ, ಯುದ್ಧ ವಿಮಾನ ಹಾರಾಟ ಹಾಗೂ ಬಾಹ್ಯಾಕಾಶ ಆಧಾರಿತ ವ್ಯವಸ್ಥೆಯ ನಿರ್ವಹಣೆ ಮಾಡುವುದು ಈ ಅಧಿಕಾರಿಗಳ ಹೊಣೆಯಾಗಿದೆ' ಎಂದರು.
'ಈ ವಿಭಾಗ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೆಲವು ವಾರಗಳ ಹಿಂದೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರಿಗಳ ಮೊದಲ ತಂಡಕ್ಕೆ ಐಎಎಫ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ. ವರ್ಷಾಂತ್ಯದಲ್ಲಿ ಅವರು ಸೇವೆಗೆ ಲಭಿಸಲಿದ್ದಾರೆ' ಎಂದು ಹೇಳಿದರು.
ಮೊದಲ ಹಂತದಲ್ಲಿ ದಿಂಡಿಗಲ್ ಹಾಗೂ ಎರಡನೇ ಹಂತದಲ್ಲಿ ಬೇಗಂಪೇಟೆಯಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲದೇ, ಬೇಗಂಪೇಟೆಯ ಏರ್‌ಪೋರ್ಸ್ ಸ್ಟೇಷನ್‌ನಲ್ಲಿಯೇ ಶಸ್ತ್ರಾಸ್ತ್ರ ನಿರ್ವಹಣಾ ಶಾಲೆಯನ್ನೂ ತೆರೆಯಲಾಗುತ್ತದೆ ಎಂದರು.