ಕುಂಬಳೆ: ಸಂಘಟನೆಯ ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರೂ ಪಾಲ್ಗೊಳ್ಳುವುದರಿಂದ ಸಂಘಟನೆಯು ಬಲವಾಗುವುದಲ್ಲದೆ ವೃತ್ತಿಗೌರವವನ್ನು ಪಡೆಯುತ್ತಾನೆ. ಸಂಘಟನೆಯು ನಮ್ಮನ್ನು ಎತ್ತರಕ್ಕೇರಿಸುತ್ತದೆ ಎಂದು ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ನುಡಿದರು.
ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದ ಸಭಾ ಭವನದಲ್ಲಿ ಶುಕ್ರವಾರ ನಡೆದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ನ ಬದಿಯಡ್ಕ ಘಟಕದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಸುರೇಶ್ ಆಚಾರ್ಯ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆ ಹಾಗೂ ವಲಯದ ಸಭೆಗಳಲ್ಲಿ ನಡೆದ ತೀರ್ಮಾನಗಳನ್ನು ಪ್ರತಿಯೊಬ್ಬ ಸದಸ್ಯರಿಗೂ ತಲುಪಿಸಲು ಘಟಕದ ಪದಾಧಿಕಾರಿಗಳು ಶ್ರಮವಹಿಸಬೇಕು ಎಂದರು.
ಬದಿಯಡ್ಕ ಘಟಕ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ರಾಜ್ಯ ವನಿತಾ ವಿಭಾಗ ಸಂಯೋಜಕ ಹರೀಶ್ ಪಾಲಕುನ್ನು, ಎಕೆಪಿಎ ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ., ಕುಂಬಳೆ ವಲಯ ಸಮಿತಿ ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು, ಜಿಲ್ಲಾ ಇನ್ಶೂರೆನ್ಸ್ ವಿಭಾಗ ಸಂಚಾಲಕ ಅಶೋಕನ್ ಪೊಯಿನಾಚಿ, ಬದಿಯಡ್ಕ ಘಟಕ ಉಸ್ತುವಾರಿ ಉದಯ ಮೈಕುರಿ ಮಾತನಾಡಿದರು. ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬದಿಯಡ್ಕ ಘಟಕ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಕೋಶಾಧಿಕಾರಿ ಬಾಲಕೃಷ್ಣ ನಿಡುಗಳ ವಂದಿಸಿದರು.