ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೋಷಾರೋಪ ನಿಗದಿಪಡಿಸಬೇಕು ಎಂದು ಆರು ಮಹಿಳಾ ಕುಸ್ತಿಪಟುಗಳು ಶುಕ್ರವಾರ ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಮಹಿಳಾ ಕುಸ್ತಿಪಟುಗಳು ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಎದುರು ಈ ಮನವಿ ಸಲ್ಲಿಸಿದರು.
'ಪ್ರಥಮ ಮಾಹಿತಿ ವರದಿಯಲ್ಲಿನ (ಎಫ್‌ಐಆರ್) ಆರೋಪಗಳು ಚಾರ್ಜ್‌ಶೀಟ್‌ನಲ್ಲೂ ವಿಸ್ತಾರಗೊಂಡಿದ್ದು, ಆಪಾದಿತ ವ್ಯಕ್ತಿಗಳ ವಿರುದ್ಧ ದೋಷಾರೋಪಣೆ ನಿಗದಿ ಮಾಡುವ ಅಗತ್ಯವಿದೆ' ಎಂದು ವಕೀಲೆ ರಬೆಕ್ಕಾ ಜಾನ್ ಮನವಿ ಮಾಡಿದರು.
'ಮೇಲ್ವಿಚಾರಣಾ ಸಮಿತಿಯನ್ನು ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಪ್ರಕಾರ ರಚನೆ ಮಾಡಿಲ್ಲ. ಅದರ ವರದಿಯನ್ನು ತಿರಸ್ಕರಿಸಬೇಕು. ಏಕೆಂದರೆ ಈ ಸಮಿತಿಯು ಕೇವಲ ಕಣ್ಣೊರೆಸುವ ತಂತ್ರ ಮಾತ್ರ. ಸೂಕ್ತ ತನಿಖೆ ನಡೆಸದೇ ಸಾಮಾನ್ಯ ಶಿಫಾರಸುಗಳನ್ನು ಸಮಿತಿ ನೀಡಿದೆ' ಎಂದು ವಕೀಲರು ಅಭಿಪ್ರಾಯಪಟ್ಟರು. ಬಾಕ್ಸರ್ ಎಂ.ಸಿ ಮೇರಿ ಕೋಮ್ ಮೇಲ್ವಿಚಾರಣಾ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳ ವಾದ ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿತು. ಸಿಂಗ್ ಮತ್ತು ತೋಮರ್‌ಗೆ ನ್ಯಾಯಾಲಯ ಜುಲೈ 20ರಂದು ಜಾಮೀನು ಮಂಜೂರು ಮಾಡಿತ್ತು.