ಶ್ರೀನಗರ: 'ಸಿಖ್ ಸಮುದಾಯವು ದೇಶದ ಅವಿಭಾಜ್ಯ ಅಂಗವಾಗಿದ್ದು, ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಭಾರತ-ಕೆನಡಾ ನಡುವೆ ವಿವಾದ ಎಬ್ಬಿಸಲಾಗಿದೆ. ಇದೊಂದು ರಾಜಕೀಯ ಗಿಮಿಕ್ ಆಗಿದೆ' ಎಂದು ಸರ್ವಪಕ್ಷ ಸಿಖ್ ಸಮನ್ವಯ ಸಮಿತಿ(ಎಪಿಎಸ್‌ಸಿಸಿ) ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ಹೇಳಿದರು.
ಶ್ರೀನಗರ: 'ಸಿಖ್ ಸಮುದಾಯವು ದೇಶದ ಅವಿಭಾಜ್ಯ ಅಂಗವಾಗಿದ್ದು, ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಭಾರತ-ಕೆನಡಾ ನಡುವೆ ವಿವಾದ ಎಬ್ಬಿಸಲಾಗಿದೆ. ಇದೊಂದು ರಾಜಕೀಯ ಗಿಮಿಕ್ ಆಗಿದೆ' ಎಂದು ಸರ್ವಪಕ್ಷ ಸಿಖ್ ಸಮನ್ವಯ ಸಮಿತಿ(ಎಪಿಎಸ್‌ಸಿಸಿ) ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ಹೇಳಿದರು.
'ಇದೀಗ ಎಲ್ಲವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆರ್‌ಎಸ್‌ಎಸ್ ಅಧಿಕಾರ ಬಂದ ಮೇಲೆ 'ಘರ್ ವಾಪಾಸ್ಸಿ' ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮುಸ್ಲಿಮರು, ಸಿಖ್ಖರು ಅಥವಾ ಇನ್ಯಾವುದೇ ಧರ್ಮದವರೇ ಆಗಲಿ ಅವರ ಕುರಿತು ಇದನ್ನೇ ಮಾತನಾಡಲಾಗುತ್ತಿದೆ. ಅದೊಂದೆ ಅವರ ಅಜೆಂಡಾ ಆಗಿದೆ. ಇಂತಹ ನಡೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ' ಎಂದು ಕಿಡಿಕಾರಿದರು.
'ಚುನಾವಣೆಗಳು ಸಮೀಸುತ್ತಿದ್ದು, ಇದೀಗ ಭಾರತ-ಕೆನಡಾ ವಿವಾದ ಮೇಲ್ಪಂಕಿಗೆ ಬಂದಿದೆ. ಮತಗಳನ್ನು ಸೆಳೆಯುವ ಉದ್ದೇಶ ಬಿಟ್ಟು ಇದರಲ್ಲಿ ಇನ್ಯಾವುದೇ ಉದ್ದೇಶವಿಲ್ಲ. ನಮ್ಮದು ಪ್ರಗತಿಪರ ಸಮುದಾಯವಾಗಿದ್ದು, ದೇಶದ ಏಳಿಗೆಗಾಗಿ ಶ್ರಮಿಸಿದೆ. ಇನ್ನು ಮುಂದೆಯೂ ಹಾಗೆಯೇ ಇರಲಿದೆ' ಎಂದರು.
ಖಾಲಿಸ್ತಾನ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇದು ಯಾವೊಬ್ಬ ಸಿಖ್ಖರು ಇಷ್ಟಪಡದ ಒಂದು ವಿಷಯ. ಖಲಿಸ್ತಾನ ಎನ್ನುವ ಪದ ರಾಜಕಾರಣಿಗಳ ಬಾಯಿಂದ ಮಾತ್ರ ಹೊರಬಂದಿದೆ. ಜನರಿಂದ ಬಂದಿಲ್ಲ. ರಾಜಕೀಯ ಲಾಭಕ್ಕಾಗಿ ಕಾಶ್ಮೀರ ಸಮಸ್ಯೆಯ ಮಾದರಿಯಲ್ಲಿಯೇ ನಿರ್ಮಿಸಲಾದ ಒಂದು ರಾಜಕೀಯ ಪಿತೂರಿಯೇ ಈ ಖಲಿಸ್ತಾನ. ಕಾಶ್ಮೀರದಲ್ಲಿ ಪಾಕಿಸ್ತಾನದ ಸನ್ನಿವೇಶವನ್ನು ರಚಿಸಿ ಸಮಸ್ಯೆ ಹುಟ್ಟುಹಾಕಿದಂತೆ ಪಂಜಾಬ್‌ನಲ್ಲಿ ಖಲಿಸ್ತಾನ ಎಂಬ ಸನ್ನಿವೇಶವನ್ನು ಸೃಷ್ಟಿಸಲಾಗಿದೆ' ಎಂದರು.
'ಸಿಖ್ಖರಿಗೆ ನ್ಯಾಯ ಸಿಗುವ ಭರವಸೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಘಟನೆ(ಎಪಿಎಸ್‌ಸಿಸಿ) ವಿವಿಧ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇದೀಗ ನಮ್ಮ ಸಮುದಾಯಕ್ಕೆ ಬೆಂಬಲ ನೀಡದ ಪಕ್ಷಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ' ಎಂದು ಹೇಳಿದರು.