ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿ ಚೀನಾ ಯೋಧರೊಂದಿಗೆ ನಡೆದ ಸಂಘರ್ಷದ ವೇಳೆ ನಮ್ಮ ಸೈನಿಕರು ತೋರಿದ ದೃಢವಾದ ಪ್ರತಿರೋಧದಿಂದಾಗಿ ರಾಜಕೀಯ ಮತ್ತು ಮಿಲಿಟರಿ ವಿಚಾರವಾಗಿ ಭಾರತದ ಸಾಮರ್ಥ್ಯ ಹೊಸ ಎತ್ತರಕ್ಕೆ ಏರುತ್ತಿರುವುದನ್ನು ಜಗತ್ತು ಗಮನಿಸುವಂತಾಯಿತು ಎಂದು ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಶುಕ್ರವಾರ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
'2020ರ ಮೇನಲ್ಲಿ ತನ್ನ ಎದುರಾಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತದ ತಂತ್ರವನ್ನು ಇತರ ಹಲವು ದೇಶಗಳು ಅಳವಡಿಸಿಕೊಳ್ಳಲು ಮುಂದಾಗುತ್ತಿವೆ. ಅದರಲ್ಲೂ, ಕೋವಿಡ್ ಪಿಡುಗಿನಿಂದಾಗಿ ಕುಸಿದಿದ್ದ ಆರ್ಥಿಕತೆಯನ್ನು ಸರಿದಾರಿಗೆ ತಂದ ಬಗೆಯನ್ನು ಇತರ ದೇಶಗಳು ಗಮನಿಸುತ್ತಿವೆ' ಎಂದು ಹೇಳಿದ್ದಾರೆ.
'ಚೀನಾ ಯಾವಾಗಲೂ ಆಕ್ರಮಣಶೀಲವಾಗಿ ವರ್ತಿಸುತ್ತದೆ. ತನ್ನ ಗಡಿಯಾಚೆಗೂ ಪ್ರಾಬಲ್ಯ ತೋರಿಸಲು ಯತ್ನಿಸುವ ಅದರ ಪ್ರವೃತ್ತಿಯೇ ಇದಕ್ಕೆ ಸಾಕ್ಷ್ಯವಾಗಿದೆ' ಎಂದರು.
'ರಾಜಕೀಯವಾಗಿ, ಆರ್ಥಿಕ, ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಚೀನಾ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿರುವುದು ಗಮನಾರ್ಹ. ಹೊಸ ಜಾಗತಿಕ ವ್ಯವಸ್ಥೆಯೊಂದನ್ನು ಹುಟ್ಟುಹಾಕುವ ಹಾಗೂ ಅದನ್ನು ಮುನ್ನಡೆಸಬೇಕು ಎಂಬ ಅದರ ಪ್ರಯತ್ನಗಳತ್ತ ಈ ವಿದ್ಯಮಾನಗಳು ಬೊಟ್ಟು ಮಾಡುತ್ತವೆ' ಎಂದು ಜನರಲ್ ಪಾಂಡೆ ವಿಶ್ಲೇಷಿಸಿದರು.