ತಿರುವನಂತಪುರ: ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿರುವ ನಿಪಾ ವೈರಾಣು ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ. ಆದರೆ, ರಾಜ್ಯದಲ್ಲಿ ಆತಂಕ ಕೊನೆಗೊಂಡಿಲ್ಲ. ಸೋಂಕಿನ ಎರಡನೇ ಅಲೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಪಾ ಭೀತಿ ಸಂಪೂರ್ಣವಾಗಿ ಮುಗಿದಿದೆ ಎಂದು ಹೇಳಲಾಗದು. ಆದರೆ, ಸೋಂಕು ಹೆಚ್ಚಿನ ಜನರಿಗೆ ಹರಡಿಲ್ಲದಿರುವುದು ಸಮಾಧಾನದ ಸಂಗತಿ ಎಂದು ಹೇಳಿದ್ದಾರೆ.
'ನಿಪಾ ಸೋಂಕು ಪರಿಶೀಲನಾ ಸಭೆ ನಡೆಯಿತು. ಸೋಂಕಿನ ಎರಡನೇ ಅಲೆಯ ಸಾಧ್ಯತೆ ತೀರಾ ಕಡಿಮೆ. ಆದರೆ, ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವೈರಾಣುವನ್ನು ಆರಂಭದಲ್ಲೇ ಪತ್ತೆ ಹಚ್ಚಿದ್ದರಿಂದಾಗಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಸಾಧ್ಯವಾಗಿದೆ' ಎಂದು ವಿಜಯನ್ ತಿಳಿಸಿದ್ದಾರೆ.
ಕೋಯಿಕ್ಕೋಡ್‌ನಲ್ಲಿ ನಿಪಾ ವೈರಾಣು ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದಲೂ (ಐಸಿಎಂಆರ್) ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸದ್ಯ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ವಿವರಿಸಿದ್ದಾರೆ.
ನಿಪಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ಈ ತಿಂಗಳ ಮೊದಲ ವಾರದಲ್ಲಿ ಮೃತಪಟ್ಟಿದ್ದ.
ಕೇರಳದಲ್ಲಿ ಒಟ್ಟು ಆರು ಜನರಿಗೆ ನಿಪಾ ದೃಢಪಟ್ಟಿದೆ. ಸೋಂಕಿನ ಲಕ್ಷಣಗಳು ಕಂಡುಬಂದಿರುವ ಉಳಿದ 9 ಜನರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.