ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಮತ್ತು ಭೂಕುಸಿತದಿಂದ ಉಂಟಾದ ಭಾರಿ ನಷ್ಟ ಹಾಗೂ ಜೀವಹಾನಿಯ ಪರಿಣಾಮದ ಬಳಿಕ, ಗಿರಿಧಾಮಗಳ ಧಾರಣಾ ಸಾಮರ್ಥ್ಯದ ಮೌಲ್ಯಮಾಪನವನ್ನು ನಿಗದಿತ ಕಾಲಮಿತಿಯೊಳಗೆ ನಡೆಸುವಂತೆ ಹಿಮಾಲಯ ಪ್ರದೇಶಗಳ 13 ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಅಶೋಕ್ ಕುಮಾರ್ ರಾಘವ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯವು ಎಲ್ಲಾ 13 ರಾಜ್ಯಗಳಿಗೆ ಕ್ರಮ ತೆಗೆದುಕೊಂಡಿರುವ ವರದಿಯನ್ನು ಸಲ್ಲಿಸಬೇಕೆಂದು ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿದೆ.
ಈ ಕುರಿತು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿರುವ ಸಚಿವಾಲಯವು, ಕೇಂದ್ರ ಸರ್ಕಾರವು ಈ ಹಿಂದೆ ಅಂದರೆ 2020ರ ಜ. 30ರಂದು ಹಿಮಾಲಯದ 13 ರಾಜ್ಯಗಳಿಗೆ ಪತ್ರ ಬರೆದು, ನಗರಗಳು ಮತ್ತು ಪರಿಸರ-ಸೂಕ್ಷ್ಮ ವಲಯಗಳನ್ನು ಒಳಗೊಂಡಂತೆ ಗಿರಿಧಾಮಗಳ ಧಾರಣಾ ಸಾಮರ್ಥ್ಯವನ್ನು ನಿರ್ಣಯಿಸಲು ಮಾರ್ಗಸೂಚಿಗಳನ್ನು ಒದಗಿಸಿತ್ತು ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದೆ.
ಈ ಸಂಬಂಧ 2023ರ ಮೇ 19ರಂದು ಆ ರಾಜ್ಯಗಳಿಗೆ ಜ್ಞಾಪನಾ ಪತ್ರವನ್ನು ಕಳುಹಿಸಿದ್ದು, ಒಂದು ವೇಳೆ ಅಧ್ಯಯನ ಕೈಗೊಳ್ಳದಿದ್ದಲ್ಲಿ ಅಂಥವರು ಕ್ರಿಯಾಯೋಜನೆ ಸಲ್ಲಿಸಿ, ಆದಷ್ಟು ಬೇಗ ಧಾರಣಾ ಸಾಮರ್ಥ್ಯದ ಅಧ್ಯಯನ ಕೈಗೊಳ್ಳಬಹುದು ಎಂದೂ ವಿನಂತಿಸಲಾಗಿದೆ ಎಂದೂ ಸರ್ಕಾರವು ತಿಳಿಸಿದೆ.